Asianet Suvarna News Asianet Suvarna News

ಮೆಟ್ರೋ ಡಿಪೋಗೆ 2656 ಮರಗಳ ಹನನ!

ಮುಂಬೈನಲ್ಲಿ ಮೆಟ್ರೋ ಡಿಪೋಗೆ 2656 ಮರಗಳ ಹನನ| ಸಾರ್ವಜನಿಕರು, ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿಭಟನೆ| 29 ಮಂದಿ ಬಂಧನ, ಶಿವಸೇನೆ ನಾಯಕಿ ಪ್ರಿಯಾಂಕಾ ವಶಕ್ಕೆ| ಮರ ಕಡಿತಕ್ಕೆ ಠಾಕ್ರೆಗಳಿಂದಲೂ ವಿರೋಧ, ಮೋದಿಗೆ ಟಾಂಗ್‌

Bombay HC refuses stay on cutting of trees in Aarey Colony
Author
Bangalore, First Published Oct 6, 2019, 11:13 AM IST

ಮುಂಬೈ[ಅ.06]: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೆಟ್ರೋ ರೈಲು ಡಿಪೋ ನಿರ್ಮಾಣಕ್ಕೆಂದು ಆರೇ ಕಾಲೋನಿಯಲ್ಲಿರುವ 2656 ಮರಗಳನ್ನು ಕತ್ತರಿಸಲು ಮುಂಬೈ ಮಹಾನಗರಪಾಲಿಕೆ ಮೆಟ್ರೋ ನಿಗಮಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಶನಿವಾರ ಸಾರ್ವಜನಿಕ ಪ್ರತಿಭಟನೆ ತಾರಕಕ್ಕೇರಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಈ ಸಂಬಂಧ 29 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ 60 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಮೆಟ್ರೋಗಾಗಿ 2600 ಮರ ಕಡಿಯಲು ಕೋರ್ಟ್ ಸಮ್ಮತಿ!

‘ಆರೇ ಕಾಲೋನಿಯಲ್ಲಿನ ಮರ ಹನನಕ್ಕೆ ತಡೆ ನೀಡಬೇಕು. ಆರೇ ಕಾಲೋನಿಯನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸಬೇಕು’ ಎಂದು ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿ, ಮರ ಕಡಿತಕ್ಕೆ ತಡೆ ನೀಡಲು ಸತತ 2ನೇ ದಿನವೂ ನಿರಾಕರಿಸಿದೆ. ಹೀಗಾಗಿ ಶುಕ್ರವಾರ ರಾತ್ರಿಯಿಂದಲೇ ಮರಕ್ಕೆ ಕೊಡಲಿಯೇಟು ಹಾಕುವ ಕಾರ್ಯ ಆರಂಭವಾಗಿದ್ದು, ಮೊದಲಿಗೆ 200 ಮರಗಳನ್ನು ಕಡಿಯಲಾಗಿದೆ. ಇದರ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಕೆಲ ಸಮಯ ಉದ್ರಿಕ್ತಗೊಂಡ ಕಾರಣ ಸ್ಥಳದಲ್ಲಿ 144ನೇ ವಿಧಿ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ.

ಆದಾಗ್ಯೂ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ಏರ್ಪಟ್ಟು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ 29 ಮಂದಿಯನ್ನು ಬಂಧಿಸಲಾಗಿದ್ದು, ಸ್ಥಳಕ್ಕೆ ಪ್ರತಿಭಟನೆಗೆ ಆಗಮಿಸಿದ ಶಿವಸೇನಾ ನಾಯಕಿ ಪ್ರಿಯಾಂಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಠಾಕ್ರೆಗಳಿಂದಲೇ ವಿರೋಧ:

ಮರಗಳಿಕೆ ಕೊಡಲಿಯೇಟು ಹಾಕುವುದನ್ನು ಶಿವಸೇನಾ ಮುಖಂಡರಾದ ಉದ್ಧವ್‌ ಠಾಕ್ರೆ, ಆದಿತ್ಯ ಠಾಕ್ರೆ, ಕಾಂಗ್ರೆಸ್‌ ಮುಖಂಡ ಸಂಜಯ್‌ ನಿರುಪಂ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ‘ಜಾಗತಿಕ ವೇದಿಕೆಯಲ್ಲಿ ಪರಿಸರದ ಬಗ್ಗೆ ಮಾತನಾಡುವುದು, ಇಲ್ಲಿ ಮರ ಕಡಿಯುವುದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆದಿತ್ಯ ಟಾಂಗ್‌ ನೀಡಿದ್ದಾರೆ.

ಆದರೆ ‘ದಿಲ್ಲಿ ಮೆಟ್ರೋ ನಿರ್ಮಾಣದ ವೇಳೆಯೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದವು. ಅಭಿವೃದ್ಧಿ ಕಾರ್ಯಕ್ಕಾಗಿ ಮರಗಳ ಹನನದಲ್ಲಿ ತಪ್ಪಿಲ್ಲ. ಹೊಸ ಸಸಿಗಳನ್ನು ನೆಟ್ಟು ಪರಿಸರ ಹಾನಿ ಸರಿದೂಗಿಸಲಾಗುವುದು’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸಮರ್ಥಿಸಿದ್ದಾರೆ.

Follow Us:
Download App:
  • android
  • ios