ಭಾರತದ ರಾಯಭಾರಿ ಕಚೇರಿ ಸಮೀಪದಲ್ಲೇ ಈ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಚೇರಿಯ ಗಾಜುಗಳು ಪುಡಿಪುಡಿಗೊಂಡಿರುವ ವರದಿಯಾಗಿದೆ. ಅದೃಷ್ಟವಶಾತ್, ಭಾರತೀಯ ರಾಯಭಾರ ಕಚೇರಿಯಲ್ಲಿರುವ ಎಲ್ಲಾ ಸಿಬ್ಬಂದಿಯೂ ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ನವದೆಹಲಿ(ಮೇ 31): ಆಫ್ಘಾನಿಸ್ತಾನದ ರಾಜಧಾನಿ ಕಾಬೂನ್'ನಲ್ಲಿ ಉಗ್ರರು ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಭಾರತೀಯ ರಾಯಭಾರ ಕಚೇರಿ ಬಳಿ ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು 80ಕ್ಕೂ ಮಂದಿ ಸಾವನ್ನಪ್ಪಿದ್ದಾರೆ, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಎನ್'ಡಿಟಿವಿ ವರದಿ ಮಾಡಿದೆ. ಆದರೆ, ಐಸಿಸ್ ಸೇರಿದಂತೆ ಯಾವೊಂದು ಉಗ್ರ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಬೂಲ್'ನಲ್ಲಿ ಹಲವು ಬಾರಿ ದಾಳಿ ನಡೆಸಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯವರು ಈ ಕೃತ್ಯ ಎಸಗಿರುವ ಶಂಕೆ ಇದೆ. ಆಫ್ಘಾನಿಸ್ತಾನದಲ್ಲಿ ಅಧಿಕಾರ ಸ್ಥಾಪಿಸುವ ಹಪಾಹಪಿಯಲ್ಲಿರುವ ತಾಲಿಬಾನ್ ಸಂಘಟನೆಯ ಕೈವಾಡವೂ ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕಾರ್ ಬಾಂಬ್ ಸ್ಫೋಟಗೊಂಡ ಸನಿಹದಲ್ಲೇ ಭಾರತದ ರಾಯಭಾರಿ ಕಚೇರಿ ಇದೆ. ಇದೇ ರಸ್ತೆಯಲ್ಲಿ ಇನ್ನೂ ಹಲವು ದೇಶಗಳ ರಾಯಭಾರ ಕಚೇರಿಗಳೂ ಇವೆ. ಅಧ್ಯಕ್ಷೀಯ ಅರಮನೆಯೂ ಸಮೀಪದಲ್ಲೇ ಇದೆ. ಸ್ಫೋಟದ ತೀವ್ರತೆಗೆ ಭಾರತೀಯ ರಾಯಭಾರ ಕಚೇರಿಯ ಗಾಜುಗಳು ಪುಡಿಪುಡಿಗೊಂಡಿರುವ ವರದಿಯಾಗಿದೆ. ಅದೃಷ್ಟವಶಾತ್, ಕಚೇರಿಯಲ್ಲಿರುವ ಎಲ್ಲಾ ಸಿಬ್ಬಂದಿಯೂ ಸುರಕ್ಷಿತರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಮೋದಿ ಖಂಡನೆ:
ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಬೂಲ್ ಸ್ಫೋಟ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ಬೆಂಬಲಿಸುವ ಶಕ್ತಿಗಳನ್ನು ಸೋಲಿಸಬೇಕಿದೆ ಎಂದು ಮೋದಿ ಕರೆಕೊಟ್ಟಿದ್ದಾರೆ.
