ಬೆಂಗಳೂರು ಮೆಟ್ರೋ ನಿಗಮಕ್ಕೆ (ಬಿಎಂಆರ್‌ಸಿಎಲ್‌) ಫೀಡರ್‌ ಸೇವೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಷ್ಟಅನುಭವಿಸುತ್ತಿದ್ದು, ಈ ನಷ್ಟವನ್ನು ಭರಿಸಿಕೊಡ ಬೇಕು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‌ರೂಪ್‌ ಕೌರ್‌ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು(ಜೂ.29): ಬೆಂಗಳೂರು ಮೆಟ್ರೋ ನಿಗಮಕ್ಕೆ (ಬಿಎಂಆರ್‌ಸಿಎಲ್‌) ಫೀಡರ್‌ ಸೇವೆ ನೀಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಷ್ಟಅನುಭವಿಸುತ್ತಿದ್ದು, ಈ ನಷ್ಟವನ್ನು ಭರಿಸಿಕೊಡ ಬೇಕು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕ್‌ರೂಪ್‌ ಕೌರ್‌ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ದೆಹಲಿ ಮೆಟ್ರೋ ನಿಗಮವು ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಂತ ವೆಚ್ಚದಲ್ಲಿ ಫೀಡರ್‌ ಸೇವೆ ನೀಡುತ್ತಿದೆ. ಆದರೆ, ಬೆಂಗಳೂರು ಮೆಟ್ರೋ ನಿಗಮಕ್ಕೆ ಬಿಎಂಟಿಸಿ ಫೀಡರ್‌ ಸೇವೆ ನೀಡುತ್ತಿದೆ. ಫೀಡರ್‌ ಸೇವೆ ಆರಂಭಿಸಿದಾಗಿನಿಂದ ಬಿಎಂಟಿಸಿಗೆ ನಷ್ಟಉಂಟಾಗುತ್ತಿದೆ. ಹಾಗಾಗಿ ಈ ನಷ್ಟಪರಿಹಾರವನ್ನು ಬಿಎಂಆರ್‌ಸಿಎಲ್‌ ಕಟ್ಟಿಕೊಡಬೇಕು ಎಂದು ಕೋರಿದ್ದು, ಫೀಡರ್‌ ಸೇವೆಯ ಆದಾಯ-ನಷ್ಟದ ಲೆಕ್ಕವನ್ನೂ ಪತ್ರದಲ್ಲಿ ನಮೂದಿಸಿದ್ದಾರೆ.

ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗ (ನೇರಳೆ)ದಲ್ಲಿ 2016ರ ಅಕ್ಟೋಬರ್‌ನಿಂದ 2017ರ ಮಾಚ್‌ರ್‍ ಅವಧಿಯಲ್ಲಿ 14,71,983 ಕಿ.ಮೀ. ಫೀಡರ್‌ ಸೇವೆ ನೀಡಲಾಗಿದೆ. ಇದರಿಂದ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 39.43 ರೂ ಆದಾಯ ಬಂದಿದೆ. ಆದರೆ, ಪ್ರತಿ ಕಿ.ಮೀ. ಸರಾಸರಿ 54.24 ರೂ ವೆಚ್ಚವಾಗಿದೆ. ಒಟ್ಟಾರೆ ಈ ಮಾರ್ಗದ ಫೀಡರ್‌ ಸೇವೆಯಿಂದ ಸಂಸ್ಥೆಗೆ ರೂ 2.18 ಕೋಟಿ ನಷ್ಟಉಂಟಾಗಿದೆ. ಈ ನಷ್ಟದ ಮೊತ್ತವನ್ನು ಬಿಎಂಆರ್‌ಸಿಎಲ್‌ ನಿಯಮಿತವಾಗಿ ಬಿಎಂಟಿಸಿಗೆ ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಆರಂಭಗೊಂಡ ಉತ್ತರ-ದಕ್ಷಿಣ ಮೆಟ್ರೋ ಮಾರ್ಗ ಮತ್ತು ಪೂರ್ವ-ಪಶ್ಚಿಮ ಮೆಟ್ರೋ ಮಾರ್ಗದಲ್ಲಿ ಪ್ರತಿ ನಿತ್ಯ 33,167 ಕಿ.ಮೀ ಫೀಡರ್‌ ಸೇವೆ ನೀಡಲಾಗುತ್ತಿದೆ. ಕಳೆದ ವರ್ಷದ ಫೀಡರ್‌ ಸೇವೆಯ ಆದಾಯ-ನಷ್ಟದ ಆಧಾರದ ಮೇಲಿನ ವಿಶ್ಲೇಷಣೆ ಆಧಾರದ ಮೇಲೆ ಪ್ರತಿ ಕಿ.ಮೀ. ರೂ 15 ನಷ್ಟವಾಗುತ್ತಿದೆ. ಈ ಮೂಲಕ ದಿನಕ್ಕೆ ರೂ 4,97,505 ನಷ್ಟಉಂಟಾಗುತ್ತಿದೆ. ವಾರ್ಷಿಕ ಸುಮಾರು .18.16 ಕೋಟಿ ಆರ್ಥಿಕ ನಷ್ಟಉಂಟಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತ್ರೈಮಾಸಿಕ ಪರಾಮರ್ಶೆ: ಫೀಡರ್‌ ಸೇವೆಯಿಂದ ಬಿಎಂಟಿಸಿಗೆ ಆಗುತ್ತಿರುವ ನಷ್ಟವನ್ನು ಬಿಎಂಆರ್‌ಸಿಎಲ್‌ ಭರಿಸಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಅದಕ್ಕಾಗಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್‌ ಮೆಟ್ರೋ ಫೀಡರ್‌ ಸೇವೆಯ ಆದಾಯ ಮತ್ತು ವೆಚ್ಚದ ಬಗ್ಗೆ ಪರಸ್ಪರ ಪರಾಮರ್ಶಿಸುವ ಮೂಲಕ ನಷ್ಟವನ್ನು ಸರಿದೂಗಿಸುವ ವಿಧಾನ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ನ ಸಹಭಾಗಿತ್ವ ನಿರೀಕ್ಷಿಸಲಾಗುತ್ತಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಏಕ್‌ರೂಪ್‌ ಕೌರ್‌ ಅವರು ಪತ್ರದಲ್ಲಿ ತಿಳಿಸಿದ್ದಾರೆ.