Asianet Suvarna News Asianet Suvarna News

ಬಿಎಂಟಿಸಿಗೆ 1500 ಖಾಸಗಿ ಬಸ್: ಭಾರೀ ವಿರೋಧ

ಖಾಸಗಿ ಬಸ್ ಆಪರೇಟರ್‌ಗಳಿಂದ ಗುತ್ತಿಗೆ ಆಧಾರದಡಿ 1500 ಬಸ್‌ಗಳನ್ನು ಪಡೆಯುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ನಿರ್ಧಾರಕ್ಕೆ ನೌಕರರು ಹಾಗೂ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

BMTC Workers Oppose Private Bus Idea

ಬೆಂಗಳೂರು: ಖಾಸಗಿ ಬಸ್ ಆಪರೇಟರ್‌ಗಳಿಂದ ಗುತ್ತಿಗೆ ಆಧಾರದಡಿ 1500 ಬಸ್‌ಗಳನ್ನು ಪಡೆಯುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ನಿರ್ಧಾರಕ್ಕೆ ನೌಕರರು ಹಾಗೂ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಇದು ಬಿಎಂಟಿಸಿ ನಿಗಮವನ್ನು ಖಾಸಗೀಕರಣ ಮಾಡುವ ರಾಜ್ಯ ಸರ್ಕಾರದ ಹುನ್ನಾರ ಎಂಬ ಆರೋಪ ಕೇಳಿ ಬಂದಿದೆ. ಖಾಸಗಿ ಬಸ್ ಆಪರೇಟರ್‌ಗಳಿಂದ ಗುತ್ತಿಗೆಗೆ ಬಸ್ ಪಡೆದರೆ ನಿಗಮಕ್ಕೆ ಎಳ್ಳಷ್ಟೂ ಉಪಯೋಗವಿಲ್ಲ. ಬದಲಾಗಿ ಭ್ರಷ್ಟಾಚಾರಕ್ಕೆ ದಾರಿ ಮಾಡಿದಂತಾಗುತ್ತದೆ. ಹಾಗಾಗಿ ಸರ್ಕಾರ ಗುತ್ತಿಗೆ ಬಸ್ ಪಡೆಯುವ ನಿರ್ಧಾರವನ್ನು ಕೈ ಬಿಡಬೇಕೆಂಬುದು ಬಿಎಂಟಿಸಿ ನೌಕರರ ವಲಯದ ಒತ್ತಾಯವಾಗಿದೆ.

ಖಾಸಗಿ ಚಾಲಕ ಹಾಗೂ ನಿಗಮದ ನಿರ್ವಾಹಕನ ನಡುವೆ ಹೊಂದಾಣಿಕೆ ಸಾಧ್ಯವಿಲ್ಲ. ಮುಖ್ಯವಾಗಿ ಬಸ್ ದುರಸ್ತಿಗೆ ಬಂದಲ್ಲಿ ನಿರ್ವಹಣೆಗೆ ಖಾಸಗಿಯವರ ಬಳಿ ಕಾರ್ಯಾಗಾರಗಳಿಲ್ಲ. ಇದು ನಿಗಮಕ್ಕೆ ಮತ್ತೊಂದು ಸಮಸ್ಯೆಯಾಗುತ್ತದೆ. ಅಲ್ಲದೆ, ಸಂಸ್ಥೆಗೆ ಆರ್ಥಿಕ ಹೊರ ಹೆಚ್ಚಾಗಲಿದೆ. ಗುತ್ತಿಗೆಗೆ ಬಸ್ ಪಡೆಯುವುದರಿಂದ ಈಗಾಗಲೇ ನಷ್ಟದ ಹಳಿಯಲ್ಲಿರುವ ನಿಗಮ ಮತ್ತಷ್ಟು ಅಧೋಗತಿಗೆ ತಲುಪಲಿದೆ.

ಹಾಗಾಗಿ ರಾಜ್ಯ ಸರ್ಕಾರ ಬಸ್‌ಗಳನ್ನು ಗುತ್ತಿಗೆಗೆ ಪಡೆದು ನಿಗಮಕ್ಕೆ ನೀಡುವ ಬದಲು, ತಾನೇ ಖರೀದಿಸಿ ನೀಡಿದರೆ ಒಳಿತಾಗುತ್ತದೆ ಎಂದು ನೌಕರರು ಅಭಿಪ್ರಾಯಪಟ್ಟಿದ್ದಾರೆ.

ಖಾಸಗೀಕರಣದ ಹುನ್ನಾರ: ಮೆಟ್ರೋ ರೈಲು ಸೇವೆ ಆರಂಭವಾದಾಗಿನಿಂದ ಬಿಎಂಟಿಸಿ ನಿಗಮಕ್ಕೆ ನಷ್ಟ ಹೆಚ್ಚಾಗಿದೆ. ಮೆಟ್ರೋ ಸೇವೆ ಇರುವ ಕೆಲ ಮಾರ್ಗಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೆ, ಪ್ರಸ್ತುತ ನಿಗಮದಲ್ಲಿ 6500 ಬಸ್‌ಗಳಿವೆ. ರಾಜ್ಯ ಸರ್ಕಾರ 1500 ಬಸ್‌ಗಳನ್ನು ಖರೀದಿಸಿ ಒದಗಿಸುತ್ತಿದೆ.

ಸದ್ಯದ ಪರಿಸ್ಥಿತಿಗೆ ಇಷ್ಟು ಬಸ್‌ಗಳು ಸಾಕಾಗುತ್ತದೆ. ಗುತ್ತಿಗೆ ಆಧಾರದಡಿ 1500 ಬಸ್ ಪಡೆದು  ಓಡಿಸುವ ಅಗತ್ಯವಾದರೂ ಏನಿದೆ ? ಈಗ 1500 ಬಸ್‌ಗಳು ಪಡೆದು ಮುಂದೆ ನಿರ್ವಹಣೆ ನೆಪವೊಡ್ಡಿ ಹಂತ ಹಂತವಾಗಿ ನಿಗಮವನ್ನೇ ಖಾಸಗೀಕರಣ ಮಾಡಿದರೆ ಅಶ್ಚರ್ಯವಿಲ್ಲ. ನಗರದಲ್ಲಿ ಬಿಎಂಟಿಸಿಗೆ ಸೇರಿದ ಒಂದು ಸಾವಿರಕ್ಕೂ ಅಧಿಕ ಮೌಲ್ಯದ ನಿವೇಶನ, ಬಹುಮಹಡಿ ಕಟ್ಟಡಗಳಿವೆ. ಈ ಆಸ್ತಿಯನ್ನು ಖಾಸಗಿಯವರಿಗೆ ಒಪ್ಪಿಸುವುದು ಯಾವ ನ್ಯಾಯ ಎಂದು ನಿಗಮದ ಕೆಲ ನೌಕರರು ಪ್ರಶ್ನಿಸಿತ್ತಾರೆ.

ಪಿಜಿಆರ್ ಸಿಂಧ್ಯಾ-ಖರ್ಗೆ ಅವಧಿಯಲ್ಲಿ ವಿಫಲ ಈ ಹಿಂದೆ ಪಿ.ಜಿ.ಆರ್.ಸಿಂಧ್ಯಾ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ಖಾಸಗಿಯವರಿಂದ ಸಾವಿರಾರು ಬಸ್‌ಗಳನ್ನು ಪಡೆದು ಕೈ ಸುಟ್ಟಿ ಕೊಂಡಿರುವ ನಿದರ್ಶನ ಕಣ್ಣು ಮುಂದಿದೆ. ಇದರಿಂದ ಕೋಟ್ಯಂತರ ಮೊತ್ತದ ಭ್ರಷ್ಟಾಚಾರ ನಡೆದು ಸಾರಿಗೆ ಸಂಸ್ಥೆಗೆ ನಷ್ಟ ಉಂಟಾಗಿತ್ತು. ಈ

ಸಂಬಂಧ ತನಿಖೆಯೂ ನಡೆದು ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದ್ದರಿಂದ ಸಾರಿಗೆ ಸಚಿವರು ಈ ಬಗ್ಗೆ ಹಿಂದಿನ ಸಾರಿಗೆ ಸಚಿವ ಪಿಜಿಆರ್ ಸಿಂಧ್ಯಾ ಅವರ ಬಳಿ ಮಾಹಿತಿ ಪಡೆಯುವುದು ಒಳ್ಳೆಯದು. ಸಚಿವರು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ಅಭಿಪ್ರಾಯಪಟ್ಟರು. (ಕನ್ನಡಪ್ರಭ ವಿಶೇಷ ವರದಿ)

 

Follow Us:
Download App:
  • android
  • ios