ವಿಜಯಪುರ(ನ.02): ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿರುವ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್ ಮುಂದೊಂದು ದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ’ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗುವ ಆಸೆ ನನಗೂ ಇದೆ. ಆದರೆ ಈಗಲ್ಲ. ಇನ್ನೊಂದು ಅವಧಿಗೆ ಸಿದ್ದ ರಾಮಯ್ಯವರು ಮುಖ್ಯಮಂತ್ರಿಯಾಗುತ್ತಾರೆ. ಅದಾದ ಬಳಿಕ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬನಾಗುವೆ’.ಮುಖ್ಯಮಂತ್ರಿಯಾಗುವ ಆಸೆ ಪಡುವುದು ತಪ್ಪಲ್ಲ ಎಂದು ಹೇಳಿದರು.

ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವೈಫಲ್ಯ ಆರೋಪ ಮಾಡಿ ಹೋರಾಟ ನಡೆಸುವುದಾಗಿ ಹೇಳಿದ್ದ ಬಿಜೆಪಿ, ಬಿ.ಎಸ್. ಯಡಿಯೂರಪ್ಪನವರ ಅನಾರೋಗ್ಯದ ನೆಪವೊಡ್ಡಿ ಮುಂದೂಡಿದೆ. ಯಡಿಯೂರಪ್ಪನವರು ಬೇಗನೆ ಗುಣಮುಖರಾಗಲಿ. ವಿಜಯಪುರದಲ್ಲಿಯೇ ನೀರಾವರಿ ವಿರುದ್ಧ ಹೋರಾಟ ನಡೆಸುವಂತಾಗಲಿ ಎಂದು ವ್ಯಂಗ್ಯಭರಿತವಾಗಿ ಶುಭ ಹಾರೈಸಿದರು. ಪ್ರತ್ಯೇಕ ನಾಡಧ್ವಜ ತಪ್ಪಲ್ಲ. ನಾಡ ಧ್ವಜ ಇರಲೇಬೇಕು ಎಂದು ನುಡಿದರು.