Asianet Suvarna News Asianet Suvarna News

ಬಿಜೆಪಿ- ಆರೆಸ್ಸೆಸ್‌ಗೆ ಈಗ ಸಂತೋಷ್‌ ಸಂಪರ್ಕ ಸೇತು!

ಬಿಜೆಪಿ- ಆರೆಸ್ಸೆಸ್‌ಗೆ ಈಗ ಸಂತೋಷ್‌ ಸಂಪರ್ಕ ಸೇತು| ಹೊಸ ಹುದ್ದೆಯೊಂದಿಗೆ ರಾಷ್ಟ್ರೀಯ ರಾಜಕೀಯದಲ್ಲಿ ಗಟ್ಟಿ| ರಾಜ್ಯಕ್ಕೆ ಮರಳುವ ಸಾಧ್ಯತೆ ಮತ್ತಷ್ಟುಕ್ಷೀಣ

BL Santosh Becomes The Bridge Between BJP And RSS
Author
Bangalore, First Published Jul 15, 2019, 9:50 AM IST

ವಿಜಯ್‌ ಮಲಗಿಹಾಳ, ಕನ್ನಡಪ್ರಭ

ಬೆಂಗಳೂರು[ಜು.15]: ರಾಜ್ಯ ರಾಜಕಾರಣದಲ್ಲಿ ಪ್ರಸಕ್ತ ನಡೆಯುತ್ತಿರುವ ಹಲವು ಬೆಳವಣಿಗೆಗಳ ಮಧ್ಯೆಯೇ ರಾಜ್ಯದವರೇ ಆಗಿರುವ ಬಿ.ಎಲ್‌. ಸಂತೋಷ್‌ ಅವರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಪಕ್ಷ ಮತ್ತು ಸಂಘ ಪರಿವಾರದ ನಡುವೆ ಸೇತುವೆಯಂತೆ ಕೆಲಸ ಮಾಡುವ ಜವಾಬ್ದಾರಿ ಹೊಂದಿರುವ ಹಾಗೂ ರಾಷ್ಟ್ರೀಯ ಬಿಜೆಪಿಯಲ್ಲಿ ಅಧ್ಯಕ್ಷರ ನಂತರದ ಅತ್ಯಂತ ಪ್ರಭಾವಿ ಹುದ್ದೆ ಎಂದೇ ಪರಿಗಣಿಸಲ್ಪಡುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಂತೋಷ್‌ ಅವರನ್ನು ತಮ್ಮ ತಂಡದ ಪ್ರಮುಖ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ.

ಜನರಿಗೆ ಹೆಚ್ಚು ಪರಿಚಯವಾಗಿದ್ದು ಕೆಲ ವರ್ಷಗಳಿಂದಾದರೂ ರಾಜ್ಯ ಬಿಜೆಪಿಯಲ್ಲಿ ಕಳೆದ 12 ವರ್ಷಗಳಿಂದ ಚಿರಪರಿಚಿತವಾದ ಹೆಸರು ಸಂತೋಷ್‌ ಅವರದ್ದು. ಅಷ್ಟರ ಮಟ್ಟಿಗೆ ಅವರದ್ದು ಸಂಘಟನಾ ಚಾತುರ್ಯ. ಪಕ್ಷದ ಅನೇಕ ಸಂಕಷ್ಟಗಳು ಸಂತೋಷ್‌ ಅವರ ಮಧ್ಯೆ ಪ್ರವೇಶದಿಂದಾಗಿ ಬಗೆಹರಿದಿವೆ. ಪಕ್ಷದ ಅನೇಕ ಪ್ರಮುಖ ಬೆಳವಣಿಗೆಗಳಲ್ಲಿ ಅವರ ಹೆಸರು ಆಗಾಗ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಂತೋಷ್‌ ಅವರು ಮುಖ್ಯಮಂತ್ರಿಯಾಗಬಹುದು ಎಂಬಷ್ಟರ ಮಟ್ಟಿಗೂ ಕೇಳಿಬಂತು. ಒಂದು ಹಂತದಲ್ಲಿ ಕರ್ನಾಟಕದ ಯೋಗಿ ಆದಿತ್ಯನಾಥ ಆಗಬಹುದು, ದಿಢೀರನೆ ಸಂತೋಷ್‌ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸಬಹುದು ಎಂಬ ಮಾತು ಪ್ರಸ್ತಾಪವಾಯಿತು.

ಆದರೆ, ಸಂತೋಷ್‌ ಅವರು ಮಾತ್ರ ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಕಿರುನಗೆಯೊಂದನ್ನು ಬೀರುತ್ತಲೇ ತೆರೆಮರೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆ ಮೂಲಕವೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಜೊತೆ ಸಂಘ ಪರಿವಾರದ ರಾಷ್ಟ್ರೀಯ ಮುಖಂಡರಿಗೂ ಸಂತೋಷ್‌ ಅಚ್ಚುಮೆಚ್ಚಿನವರಾದರು.

ಇದೀಗ ಸಂತೋಷ್‌ ಅವರು ಪಕ್ಷದ ರಾಷ್ಟ್ರೀಯ ಘಟಕದ ಪ್ರಮುಖ ಹುದ್ದೆಗೆ ಬಡ್ತಿ ಪಡೆದಿದ್ದರಿಂದ ಸದ್ಯಕ್ಕೆ ಅವರು ರಾಜ್ಯ ರಾಜಕಾರಣದ ಕಡೆಗೆ ವಾಪಸ್‌ ಬರುವುದು ಅಸಾಧ್ಯದ ಮಾತೇ ಸರಿ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸೀಮಿತ ಅವಧಿಯಿಲ್ಲ. ಇದುವರೆಗೆ ಈ ಸ್ಥಾನ ಅಲಂಕರಿಸಿದ್ದ ರಾಮ್‌ಲಾಲ್‌ ಅವರು ಎರಡು ದಶಕಗಳಿಂದ ಮುಂದುವರೆದಿದ್ದರು. ಹೀಗಾಗಿ, ಸಂತೋಷ್‌ ಅವರಿಗೂ ಆ ಹುದ್ದೆಯಿಂದ ಬಿಡುಗಡೆ ಸಿಗುವುದಕ್ಕೆ ಅನೇಕ ವರ್ಷಗಳಾಗಬಹುದು. ಅಷ್ಟರ ಮಟ್ಟಿಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿರಿಸಿಕೊಂಡವರು ನಿಟ್ಟುಸಿರು ಬಿಡಬಹುದಾಗಿದೆ.

ರಾಷ್ಟ್ರೀಯ ಜಂಟಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾದ ಮೇಲೂ ದಕ್ಷಿಣ ಭಾರತದ ರಾಜ್ಯಗಳ ಉಸ್ತುವಾರಿಯಾಗಿದ್ದರಿಂದ ಸಂತೋಷ್‌ ಅವರು ರಾಜ್ಯದಲ್ಲೇ ಹೆಚ್ಚು ಕಾಲ ಇರುತ್ತಿದ್ದರು. ಆದರೆ, ಇನ್ನು ಮುಂದೆ ಅವರು ದೆಹಲಿಯಲ್ಲೇ ತಮ್ಮ ವಾಸ್ತವ್ಯ ಮುಂದುವರೆಸಬೇಕಾಗುತ್ತದೆ.

ಸುಮಾರು ವರ್ಷಗಳ ಕಾಲ ಕರ್ನಾಟಕ ಬಿಜೆಪಿ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದ ಕೆಲಸ, ಪಕ್ಷದ ಹಾಲಿ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದೆ ಪಕ್ಷ ತೊರೆದು ಕೆಜೆಪಿ ಕಟ್ಟಿದ ವೇಳೆ ಬಿಜೆಪಿಯನ್ನು ಕಟ್ಟಲು ಹಗಲಿರುಳು ಶ್ರಮಿಸಿದ್ದನ್ನು ಗಮನಿಸಿದ ರಾಷ್ಟ್ರೀಯ ನಾಯಕರು ಕಳೆದ ಬಾರಿ ಅವರನ್ನು ರಾಷ್ಟ್ರೀಯ ಜಂಟಿ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು.

ರಾಷ್ಟ್ರೀಯ ಘಟಕದಲ್ಲಿ ಸ್ಥಾನ ವಹಿಸಿಕೊಂಡ ಅವರಿಗೆ ದಕ್ಷಿಣ ಭಾರತದ ರಾಜ್ಯಗಳ ಸಂಘಟನೆಯ ಹೊಣೆಯನ್ನು ವಹಿಸಲಾಗಿತ್ತು. ಕರ್ನಾಟಕವಷ್ಟೇ ಅಲ್ಲದೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಸದ್ದಿಲ್ಲದೆ ಪಕ್ಷ ಸಂಘಟನೆಯನ್ನು ಬಲಗೊಳಿಸಿದ್ದು ಸಂತೋಷ್‌ ಅವರ ಹೆಗ್ಗಳಿಕೆ.

ಬಿಜೆಪಿಯಲ್ಲಿ ಮಹತ್ವದ ಬದಲಾವಣೆ, ಬಿಎಲ್ ಸಂತೋಷ್‌ಗೆ ಹೊಸ ಹುದ್ದೆ ನೀಡಿದ ಶಾ

ಬ್ರಹ್ಮಚಾರಿಯಾಗಿರುವ 51 ವರ್ಷ ವಯಸ್ಸಿನ ಸಂತೋಷ್‌ ಅವರು ಬಾಲ್ಯದಿಂದಲೂ ಸಂಘ ಪರಿವಾರದೊಂದಿಗೆ ಒಡನಾಟ ಹೊಂದಿದವರು. ಮೂಲತಃ ಉಡುಪಿ ಜಿಲ್ಲೆಯವರಾದ ಅವರು ಎಂಜಿನಿಯರಿಂಗ್‌ ಪದವಿಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತರು. ಸಂಘದ ಪ್ರಚಾರಕರಾಗಿದ್ದ ಅವರನ್ನು 2006ರಲ್ಲಿ ಬಿಜೆಪಿಗೆ ಕರೆತರಲಾಯಿತು. ಅದೇ ವೇಳೆ ರಾಜ್ಯದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಲ್ಲಿಂದಾಚೆಗೆ ಪಕ್ಷದ ಸಂಘಟನೆಗೆ ಹೊಸ ಸ್ವರೂಪ ಕೊಡುವ ಜೊತೆಗೆ ಅದನ್ನು ಗಟ್ಟಿಗೊಳಿಸುವಲ್ಲಿ ಸಂತೋಷ್‌ ಅವರ ಪಾತ್ರ ಮಹತ್ವವಾದದ್ದು.

ಆದರೆ, ನಂತರದ ವರ್ಷಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ನಡೆದ ಅನೇಕ ಭಿನ್ನಮತೀಯ ಚಟುವಟಿಕೆಗಳ ಸಂದರ್ಭ ಸಂತೋಷ್‌ ಅವರ ಹೆಸರು ಬಲವಾಗಿ ಕೇಳಿಬರುತ್ತಿತ್ತು. ಆದರೆ, ಸಂತೋಷ್‌ ಅವರು ಮಾತ್ರ ತಮಗೆ ಪಕ್ಷದ ಸಂಘಟನೆ ಮಾತ್ರ ಮುಖ್ಯವೇ ಹೊರತು ಇತರ ವಿಷಯಗಳಲ್ಲ ಎಂಬಂತೆಯೇ ನಡೆದುಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೂ ಪಕ್ಷದ ಹಿತಾಸಕ್ತಿಯನ್ನು ಬಿಟ್ಟುಕೊಡುತ್ತಿರಲಿಲ್ಲ. ರಾಜಿಯಾಗುತ್ತಿರಲಿಲ್ಲ. ಅವರ ಈ ನಿಲವಿನಿಂದಾಗಿ ಅನೇಕರ ಜೊತೆ ಹಗೆತನವನ್ನೂ ಎದುರಿಸಬೇಕಾಯಿತು.

Follow Us:
Download App:
  • android
  • ios