ಮಂಗಳೂರಿನಲ್ಲಿ ಬಿಜೆಪಿಯಿಂದ ಬೃಹತ್‌ ಸಮಾವೇಶ: ಯೋಗಿ ಆದಿತ್ಯನಾಥ್‌ ಭಾಗಿ

news | Tuesday, March 6th, 2018
Suvarna Web Desk
Highlights

ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ ಎಂದು ಆರೋಪಿಸಿ ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಮಾ.3ರಂದು ಏಕಕಾಲದಲ್ಲಿ ಆರಂಭಿಸಿರುವ ಬಿಜೆಪಿಯ ‘ಜನಸುರಕ್ಷಾ ಯಾತ್ರೆ’ ಮಂಗಳವಾರ ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.

ಮಂಗಳೂರು : ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್‌ ಆಡಳಿತದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ ಎಂದು ಆರೋಪಿಸಿ ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಮಾ.3ರಂದು ಏಕಕಾಲದಲ್ಲಿ ಆರಂಭಿಸಿರುವ ಬಿಜೆಪಿಯ ‘ಜನಸುರಕ್ಷಾ ಯಾತ್ರೆ’ ಮಂಗಳವಾರ ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.

ಉತ್ತರ ಕನ್ನಡ, ಉಡುಪಿ, ಕೊಡಗು, ದಕ್ಷಿಣ ಜಿಲ್ಲೆಯಲ್ಲಿ ಸಂಚರಿಸಿರುವ ಈ ಯಾತ್ರೆ ಮಧ್ಯಾಹ್ನ ಮಂಗಳೂರಿನಲ್ಲಿ ಸೇರಲಿದ್ದು, ನಂತರ ಇಲ್ಲಿನ ನೆಹರೂ ಮೈದಾನದಲ್ಲಿ ಸಂಜೆ ಸಮಾವೇಶಗೊಳ್ಳಲಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತಿತರ ರಾಜ್ಯ ಮುಖಂಡರು ಈ ವೇಳೆ ಮಾತನಾಡಲಿದ್ದಾರೆ.

ಸುರತ್ಕಲ್‌ನಲ್ಲೂ ಸಭೆ: ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಗೆ ಸುರತ್ಕಲ್‌ನಿಂದ ಪಾದಯಾತ್ರೆ ನಡೆಸುವ ಬಿಜೆಪಿಯು ಹೊಸಬೆಟ್ಟಿನಲ್ಲಿ ಸಭೆ ನಡೆಸಲಿದೆ. ಇಲ್ಲಿ ಜಗದೀಶ್‌ ಶೆಟ್ಟರ್‌ ಮಾತನಾಡಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 2.30ಕ್ಕೆ ಕದ್ರಿ ದೇವಸ್ಥಾನದಿಂದ ಪಾದಯಾತ್ರೆ ಹೊರಡಲಿದೆ. ಉಡುಪಿ ಕಡೆಯಿಂದ ಆಗಮಿಸುವ ಯಾತ್ರೆಯ ಕಾರ್ಯಕರ್ತರು ನೇರವಾಗಿ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಸೇರಲಿದ್ದಾರೆ. ಇನ್ನೊಂದು ಕಡೆ ಸಂಸದ ನಳಿನ್‌ ಕುಮಾರ್‌ ನೇತೃತ್ವದಲ್ಲಿ ಪಂಪ್‌ವೆಲ್‌ನಿಂದಲೂ ಮತ್ತೊಂದು ಪಾದಯಾತ್ರೆ ಹೊರಡಲಿದೆ. ಈ ಮೂರೂ ಪಾದಯಾತ್ರೆಗಳು ಅಂಬೇಡ್ಕರ್‌ ವೃತ್ತದಲ್ಲಿ ಸೇರಿ ಅಲ್ಲಿಂದ ನೆಹರೂ ಮೈದಾನಕ್ಕೆ ಒಂದಾಗಿ ಮುನ್ನಡೆಯಲಿವೆ. ನೆಹರೂ ಮೈದಾನದಲ್ಲಿ ಸಂಜೆ 4.30ಕ್ಕೆ ಸಮಾವೇಶ ನಡೆಯಲಿದ್ದು, ರಾಜ್ಯ ಮುಖಂಡರಾದ ಬಿಎಸ್‌ವೈ, ಅನಂತ ಕುಮಾರ್‌ ಹೆಗಡೆ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಜಗದೀಶ್‌ ಶೆಟ್ಟರ್‌ ಮಾತನಾಡಲಿದ್ದಾರೆ. 5.30ಕ್ಕೆ ಯೋಗಿ ಆದಿತ್ಯನಾಥ್‌ ಪ್ರಮುಖ ಭಾಷಣ ಮಾಡುವರು. ಈ ಸಮಾವೇಶದಲ್ಲಿ ಸುಮಾರು 50 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಭೇಟಿ ಕೊಟ್ಟು ಹೋದ ನಂತರ ಕರಾವಳಿಯಲ್ಲಿ ಎದ್ದಿರುವ ಬಿಜೆಪಿ ಅಲೆಯನ್ನು ಚುನಾವಣೆ ವರೆಗೆ ಕಾಯ್ದುಕೊಳ್ಳಲು ಪಕ್ಷ ಪ್ರಯತ್ನಿಸುತ್ತಿದೆ.

ರಾಜ್ಯಸರ್ಕಾರದ್ದು ಮರ್ಡರ್‌ ಪಾಲಿಟಿಕ್ಸ್‌,

ಸಿದ್ದು ಅಯೋಗ್ಯ ಸಿಎಂ ಎಂದ ಬಿಜೆಪಿಗರು

ಉತ್ತರ ಕನ್ನಡದಿಂದ ಉಡುಪಿ ಜಿಲ್ಲೆಗೆ ಆಗಮಿಸಿದ ಪಾದಯಾತ್ರೆಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕೇಂದ್ರ ಸಚಿವ ಮನೇಕಾ ಗಾಂಧಿ ಚಾಲನೆ ನೀಡಿದರೆ, ಕೊಡಗಿನಿಂದ ಆರಂಭಗೊಂಡ ಯಾತ್ರೆ ಸೋಮವಾರ ಬಂಟ್ವಾಳದ ಮೂಲಕ ಮಂಗಳೂರಿನತ್ತ ತೆರಳಿತು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು. ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹಾಗೂ ಸಂಸದ ಪ್ರಹ್ಲಾದ್‌ ಜೋಶಿ ಅವರಂತು ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಹರಿಹಾಯ್ದರು.

ಸಿದ್ದರಾಮಯ್ಯ ಅವರೊಬ್ಬ ಅಯೋಗ್ಯ ಮುಖ್ಯಮಂತ್ರಿ, ಅವರ ದೇಹದಲ್ಲಿ ಟಿಪ್ಪು ಸುಲ್ತಾನ್‌ ರಕ್ತ ಹರಿಯುತ್ತಿದೆ ಎಂದು ಕಿಡಿಕಾರಿದ ಈಶ್ವರಪ್ಪ, ಅವರು ತಮ್ಮ ಸ್ವಾರ್ಥಕ್ಕಾಗಿ ಸ್ವಪಕ್ಷೀಯರನ್ನೇ ಚುನಾವಣೆಯಲ್ಲಿ ಸೋಲಿಸಲು ಹೇಸುವುದಿಲ್ಲ ಎಂದು ಆರೋಪಿಸಿದರು.ತನ್ಮಧ್ಯೆ, ಬಂಟ್ವಾಳದಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ್‌ ಜೋಶಿ, ರಾಜ್ಯದಲ್ಲಿ ನಡೆಯುತ್ತಿರುವ ಹೇಟ್‌ ಪಾಲಿಟಿಕ್ಸ್‌ (ದ್ವೇಷದ ರಾಜಕಾರಣ) ಮತ್ತು ಮರ್ಡರ್‌ ಪಾಲಿಟಿಕ್ಸ್‌ ಕೊನೆಗೊಳಿಸುವ ಕಾಲ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದ್ದು, ಹತ್ಯೆ ಮಾಡುವವರಿಗೆ ಬೆಂಬಲ ನೀಡುತ್ತಿದೆ ಎಂದರು. ಇದೇ ವೇಳೆ, ಸಿದ್ದರಾಮಯ್ಯ ಸಿಎಂ ಆದ ಮೇಲೆ ಕಮಿಷನ್‌ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಪ್ರಧಾನಿ ಮೋದಿ ಹೇಳಿಕೆ ಸತ್ಯದಿಂದ ಕೂಡಿದೆ ಎಂದರು.

ಮಂಗಳೂರಲ್ಲಿ ಇಂದು 3 ಪಕ್ಷಗಳ ಶಕ್ತಿ ಪ್ರದರ್ಶನ

ಮಂಗಳೂರಿನಲ್ಲಿ ಮಂಗಳವಾರ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೂರೂ ಪಕ್ಷಗಳು ಶಕ್ತಿಪ್ರದರ್ಶನ ನಡೆಸಲಿವೆ. ಒಂದು ಕಡೆ ಬಿಜೆಪಿಯ ಜನಸುರಕ್ಷಾ ಯಾತ್ರೆಯ ಸಮಾರೋಪ ನಡೆದರೆ, ಇನ್ನೊಂದು ಕಡೆ ನಗರದಲ್ಲಿ ದಿನವಿಡೀ ಜೆಡಿಎಸ್‌ನ ಸಂವಾದ ಹಾಗೂ ಸಂಜೆ ಸಮಾವೇಶ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ನಗರದ ಹೊಟೇಲ್‌ ತಾಜ್‌ ಸಭಾಂಗಣದಲ್ಲಿ ಈ ಸಂವಾದ ನಡೆಯಲಿದ್ದು, ಸಂಜೆ 4 ಗಂಟೆಗೆ ಬಿಜೆಪಿ ಯಾತ್ರೆ ಸಮಾರೋಪಗೊಳ್ಳುವ ನೆಹರೂ ಮೈದಾನದ ಪಕ್ಕದ ಪುರಭವನದಲ್ಲಿ ಸಮಾವೇಶ ನಡೆಯಲಿದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ನೆಹರೂ ಮೈದಾನದ ಹಿಂಭಾಗದಲ್ಲೇ ಬೆಳಗ್ಗೆ ಕಾಂಗ್ರೆಸ್‌ನಿಂದ ಇಂದಿರಾ ಕ್ಯಾಂಟಿನ್‌ ಉದ್ಘಾಟನೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಸಚಿವರಾದ ಯು.ಟಿ. ಖಾದರ್‌, ರಮಾನಾಥ್‌ ರೈ ಪಾಲ್ಗೊಳ್ಳಲಿದ್ದಾರೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk