ಹುಬ್ಬಳ್ಳಿ : ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ವಿವಿಧ ಪಕ್ಷಗಳಲ್ಲಿ ಗೆಲುವಿನ ಕಸರತ್ತು ಜೋರಾಗಿದೆ. 

ಕುಂದಗೋಳ ಕ್ಷೇತ್ರದಲ್ಲಿ ಬಹುದೊಡ್ಡ ಅಂತರದಿಂದ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕುಂದಗೋಳದಲ್ಲಿ ಇಡೀ ಸರ್ಕಾರವೇ ಬಂದು ಕುಳಿತಿದೆ. ಈ ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಕಾಂಗ್ರೆಸ್ ಹಣದ ಬಲದಿಂದ ಚುನಾವಣೆ ಗೆಲ್ಲಲು ಹೊರಟರೆ ನಾವು ಪ್ರೀತಿ ವಿಶ್ವಾಸದಿಂದ ಎರಡೂ ಕ್ಷೇತ್ರಗಳಲ್ಲಿ ಗೆಲುವು ಪಡೆಯುತ್ತೇವೆ ಎಂದರು. 

ಇದೇ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ ವೈ ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದರು. ಆದರೆ 10   ತಿಂಗಳಾದರೂ ಕೂಡ ಸಾಲ ಮನ್ನಾ ಆಗಿಲ್ಲ.  ಈಗ ರೈತರಿಗೆ ಸಾಂತ್ವನ ಪತ್ರ ಬರೆಯುವುದಾಗಿ ಹೇಳುತ್ತಿರುವುದು ನಗೆಪಾಟಲಿನ ವಿಚಾರ. ಕಾಂಗ್ರೆಸ್ ಜೆಡಿಎಸ್ ನಡುವಿನ ಭಿನ್ನಾಭಿಪ್ರಾಯದಿಂದ ರಾಜ್ಯದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದರು.

ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದರಿಂದ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ‌. ಲೋಕಸಭಾ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಅತಿರಥ ಮಹಾರತರು ಮನೆಗೆ ಹೋಗುತ್ತಾರೆ. ಜನರು ಚುನಾವಣೆಯಲ್ಲಿ ಇವರಿಗೆಲ್ಲಾ ಉತ್ತರ ನೀಡುತ್ತಾರೆ ಎಂದರು.

ನೆತ್ತರು ಬೇಡುವ ರಾಜಕಾರಣ: ಬಿಜೆಪಿ ಮುಖಂಡನ ಬರ್ಬರ ಹತ್ಯೆ!

ಇದೇ ವೇಳೆ ತಮ್ಮ ಪಕ್ಷದ ಮುಖಂಡರಿಗೂ ಕಿವಿ ಮಾತು ಹೇಳಿದ ಯಡಿಯೂರಪ್ಪ  ಸರ್ಕಾರ ಪತನವಾಗಲಿದೆ ಎಂದು ಹೇಳಬೇಡಿ. ಮೇ23ರಂದು ದೇಶದ ಮತದಾರರ ತೀರ್ಪಿನ ಮೇಲೆ ಮುಂದಿನ ನಿರ್ಧಾರ ಮಾಡೋಣ. ನಮ್ಮ ಮುಖಂಡರಿಗೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದರು. 

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿ ನಿಭಾಯಿಸುವುದು ಕಷ್ಟ ಎಂದರು.