ಬಿಜೆಪಿ ಅತ್ಯಧಿಕ ಸ್ಥಾನದಲ್ಲಿ ಜಯಭೇರಿ ಬಾರಿಸಲಿದೆ. 75ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದೆ. ಇನ್ನು ವಿಪಕ್ಷಗಳು ಬಿಜೆಪಿ ಹೆಸದರಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಲಖ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಸ್ ಪಿ - ಹಾಗೂ ಬಿಎಸ್ ಪಿ ಮೈತ್ರಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ 2019ನೇ ಸಾಲಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೂಡ ಹೇಳಿದ್ದಾರೆ. 

ಅಲ್ಲದೇ ಬಿಎಸ್ ಪಿ ಹಾಗೂ ಎಸ್ ಪಿ ನಡುವಿನ ಮೈತ್ರಿಯು ಸೂಕ್ತ ರೀತಿಯ ನೇತೃತ್ವ ಇಲ್ಲದ್ದು. ಅವರು ಮೊದಲು ಯಾರು ಯಾರ ಅಡಿಯಲ್ಲಿ ಕೆಲಸ ಮಾಡಬೇಕು ಎನ್ನುವುದು ನಿರ್ಧರಿಸಿಕೊಂಡರೆ ಒಳಿತು. ಅಖಿಲೇಶ್ ಯಾದವ್ ಮಾಯಾವತಿ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಾರೋ ಅಥವಾ ಮಾಯಾವತಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಕೆಲಸ ಮಾಡುತ್ತಾರೋ..? ಅಥವಾ ರಾಹುಲ್ ಗಾಂಧೀ ಇವರ ನೇತೃತ್ವವನ್ನು ಬಹಿಸುತ್ತಾರೋ ಎಂದು ಪ್ರಶ್ನೆ ಮಾಡಿದ್ದಾರೆ. 

ಇನ್ನು ಬಿಹಾರ ರೀತಿಯ ಮಹಾ ಘಟ ಬಂಧನ ನಡೆದರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಗೆ ಅವರು ಹೆದರಿ ಇಂತಹ ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಲಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಅಲ್ಲದೇ ಇದೇ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 75ಕ್ಕಿಂತಲೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳುವುದು ಖಚಿತ ಎಂದು ಅವರು ಭರವಸೆ ವ್ಯಕ್ತಪಡಿಸಿದರು. 

 ಸಂಸತ್ ಕಲಾಪದ ವೇಳೆ ರಾಹುಲ್ ಗಾಂಧಿ ಪ್ರಧಾನಿಯನ್ನು ಅಪ್ಪಿಕೊಂಡ ಬಗ್ಗೆಯೂ ಮಾತನಾಡಿ ಅದೊಂದು ಅತ್ಯಂತ ಸಣ್ಣ ಮನಸ್ಥಿತಿಯ ವರ್ತನೆ ಎಂದು ಚಾಟಿ ಬೀಸಿದರು.