ಅನ್ಯಾಯದ ವಿರುದ್ಧ  ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುತ್ತೇವೆ: ಯಡಿಯೂರಪ್ಪ | ಸರ್ಕಾರದಿಂದ ತಾರತಮ್ಯ ನೀತಿ ಖಂಡಿಸಿ ಆಕ್ರೋಶ | ಉತ್ತರ ಕರ್ನಾಟಕ ಪರ ಬಿಜೆಪಿ ಹೋರಾಟ ಶುರು 

ಬೆಳಗಾವಿ (ಡಿ. 15): ರಾಜ್ಯ ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೋಮವಾರದಿಂದ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಬರದಿಂದ ನರಳಿರುವ ಉತ್ತರ ಕರ್ನಾಟಕದ ಜನತೆಗೆ ಅಗತ್ಯ ನೆರವು ನೀಡಲು ಮುಂದಾಗುತ್ತಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಕುರಿತು ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಿದೆ ಎಂದರು.

ವಿಚಿತ್ರವೆಂದರೆ, ಈ ಸರ್ಕಾರ ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾಡಲು ಹೊರಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಯ ಹಲವಾರು ಕಾಮಗಾರಿಗಳು ಪೂರ್ಣಗೊಳ್ಳದೆ ಬಾಕಿ ಉಳಿದಿವೆ. ಆದರೆ, ಈ ಬಗ್ಗೆ ಸರ್ಕಾರಕ್ಕೆ ಆಸ್ಥೆಯಿಲ್ಲ. ಬದಲಾಗಿ, ಕೆಆರ್‌ಎಸ್‌ನಲ್ಲಿ 1500 ಕೋಟಿ ರು.ಗಳನ್ನು ವೆಚ್ಚ ಮಾಡಿ ಡಿಸ್ನಿ ಲ್ಯಾಂಡ್ ಮಾಡಲು ಹೊರಟಿದೆ. ಅಂದರೆ, ಸಮ್ಮಿಶ್ರ ಸರ್ಕಾರಕ್ಕೆ ಯಾವುದು ಮೊದಲ ಆದ್ಯತೆ ಎನ್ನುವುದು ಗೊತ್ತಾಗುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.