Asianet Suvarna News Asianet Suvarna News

ಬಿಜೆಪಿ ಮಣಿಸಲು ಕಾಂಗ್ರೆಸ್'ಗೆ 2024ರವರೆಗೆ ಸಾಧ್ಯವೇ ಇಲ್ಲ: ಅಂಬೇಡ್ಕರ್ ಮೊಮ್ಮಗ

ಕರ್ನಾಟಕ ಚುನಾವಣಾ ಭವಿಷ್ಯ ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ನಿರ್ಧರಿಸುತ್ತದೆ ಎಂದು ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ತಾವು ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಪ್ರಕಾಶ್ ಅಂಬೇಡ್ಕರ್ ಘೋಷಿಸಿಕೊಂಡಿದ್ದಾರೆ.

BJP unbeatable due to Modi non corrupt image Says Prakash Ambedkar

ನವದೆಹಲಿ(ಜ.20): ಪ್ರಧಾನಿ ನರೇಂದ್ರ ಮೋದಿ ಅವರ ಕೆಲ ನಿಲುವುಗಳ ಕಟು ಟೀಕಾಕಾರರಲ್ಲಿ ಒಬ್ಬರಾದ, ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್, 2024ರ ವರೆಗೆ ಬಿಜೆಪಿ ಮಣಿಸುವುದು ಕಾಂಗ್ರೆಸ್‌'ಗೆ ಆಗದ ಮಾತು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ ಎಂದು ಬಣ್ಣಿಸಿದ್ದಾರೆ.

ಮುಂಬೈ ಮರಾಠಿ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, 2018ರ ಡಿಸೆಂಬರ್‌'ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆಗೆ ಲೋಕಸಭೆ ಚುನಾವಣೆ ನಡೆಸುವ ಆಯ್ಕೆಯನ್ನು ಬಿಜೆಪಿ ಆಯ್ದುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ತಪ್ಪುಗಳನ್ನು ಮಾಡಿರಬಹುದು. ಆದರೆ, ಭ್ರಷ್ಟಾಚಾರ ರಹಿತ ವ್ಯಕ್ತಿತ್ವವನ್ನು ಅವರು ಹೊಂದಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್‌'ನ ಹುಳುಕುಗಳನ್ನು ಎತ್ತಿತೋರಿಸುತ್ತಾರೆ. ಅದನ್ನು ಎದುರಿಸುವುದು ಕಾಂಗ್ರೆಸ್'ಗೆ ಸಾಧ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಳ್ಳೆಯ ನಡತೆ ಹೊಂದಿದ್ದಾರೆ. ಆದರೆ, ಕಾಂಗ್ರೆಸ್‌'ನ ಇತರ ನಾಯಕರಿಗೆ ಇಂತಹ ವ್ಯಕ್ತಿತ್ವ ಇಲ್ಲ. ಹೀಗಾಗಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌'ಗೆ ಸಾಧ್ಯವಾಗುತ್ತಿಲ್ಲ. 2024ರ ವರೆಗೂ ಕಾಂಗ್ರೆಸ್ ಬಿಜೆಪಿಯನ್ನು ಮಣಿಸಿ ಅಧಿಕಾರ ಹಿಡಿಯಲಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ.

ಕರ್ನಾಟಕ ಚುನಾವಣೆ ನಿರ್ಣಾಯಕ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಡ ಪಕ್ಷಗಳು ಬಿಜೆಪಿ ವಿರುದ್ಧ ಮಹಾಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಹೋರಾಡಿದರೆ ರಾಜಕೀಯ ಚಿತ್ರಣ ಬದಲಾಗಬಹುದು. ಎಡಪಕ್ಷಗಳು ಮೋದಿ ಅವರ ಭ್ರಷ್ಟಾಚಾರ ರಹಿತ ವ್ಯಕ್ತಿತ್ವಕ್ಕೆ ಸಾಟಿಯಾಗಬಲ್ಲವು. ಎಡರಂಗ ತನ್ನ ವಿಶ್ವಾಸಾರ್ಹತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಒಂದು ವೇಳೆ ಹೀಗೇನಾದರೂ ಆದರೆ, ಬಿಜೆಪಿ ಸಂಖ್ಯೆ ಈಗ ಕಾಂಗ್ರೆಸ್ ಹೊಂದಿರುವ ಸಂಖ್ಯೆಗೆ ಕುಸಿಯಬಹುದು. ಕರ್ನಾಟಕ ಚುನಾವಣಾ ಭವಿಷ್ಯ ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ನಿರ್ಧರಿಸುತ್ತದೆ ಎಂದು ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ತಾವು ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿಯೂ ಪ್ರಕಾಶ್ ಅಂಬೇಡ್ಕರ್ ಘೋಷಿಸಿಕೊಂಡಿದ್ದಾರೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದಲಿತರ ಓಲೈಕೆ ಯತ್ನವನ್ನು ಅಸ್ಪಷ್ಟ ಬೂಟಾಟಿಕೆ ಎಂದು ಪ್ರಕಾಶ್ ಅಂಬೇಡ್ಕರ್ ಟೀಕಿಸಿದ್ದರು. ಇತ್ತೀಚಿಗೆ ಸಂಭವಿಸಿದ ಭೀಮಾ-ಕೋರೆಗಾಂವ್ ಹಿಂಸಾಚಾರ ಖಂಡಿಸಿ ಭಾರಿಪ್ ಬಹುಜನ್ ಮಹಾಸಂಘದ ಮುಖ್ಯಸ್ಥರೂ ಆಗಿರುವ ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ ಬಂದ್‌'ಗೆ ಕರೆ ನೀಡುವ ಮೂಲಕ ಸುದ್ದಿಯಾಗಿದ್ದರು.

Follow Us:
Download App:
  • android
  • ios