ನವದೆಹಲಿ(ಜ.20): ಕೋಲ್ಕತ್ತಾದಲ್ಲಿ ನಡೆದ ಪ್ರತಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ಬಂಡಾಯ ಸಂಸದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮಕೈಗೊಳ್ಳು ಬಿಜೆಪಿ ನಿರ್ಧರಿಸಿದೆ. 

ಮಾಜಿ ಕೇಂದ್ರ ಸಚಿವ, ನಟ ಶತ್ರುಘ್ನ ಸಿನ್ಹಾ ಒಕ್ಕೂಟ ಭಾರತ ಸಮಾವೇಶದಲ್ಲಿ ಭಾಗವಹಿಸಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ‘ಚೌಕಿದಾರ್ ಚೋರ್ ಹೈ’ ಹೇಳಿಕೆಯನ್ನು ಪುನರುಚ್ಛಿಸಿದ್ದರು. 

ಸಿನ್ಹಾ ನಡೆಯಿಂದ ತೀವ್ರ ಆಕ್ರೋಶಗೊಂಡಿರುವ ಬಿಜೆಪಿ, ಆರಂಭದಿಂದಲೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಅವರನ್ನು ಪಕ್ಷದಿಂದ ಕೈ ಬಿಡುವ ಕುರಿತು ಇದೀಗ ಚಿಂತನೆ ನಡೆಸಿದೆ .

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಪ್ರತಾಪ್ ರುಡಿ, ಸಿನ್ಹಾ ಒಬ್ಬ ಅವಕಾಶವಾದಿ ರಾಜಕಾರಣಿಯಾಗಿದ್ದು, ನಮ್ಮ ಪಕ್ಷದ ಸಂಸದರಾಗಿ ಅಧಿಕಾರ ಅನುಭವಿಸುತ್ತ, ವಿವಿಧ ವೇದಿಕೆಗಳಲ್ಲಿ ಪಕ್ಷದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಸಿನ್ಹಾ ಬಂಡಾಯವನ್ನು ಪಕ್ಷ ಗಂಭೀರವಾಗಿ ಪರಿಗಣಿಸಲಿದೆ ಎಂದು ರುಡಿ ಸ್ಪಷ್ಟಪಡಿಸಿದರು.