ಕೋಲ್ಕತಾ[ಜೂ.06]: ಪಶ್ಚಿಮ ಬಂಗಾಳದಲ್ಲಿ 18 ಲೋಕಸಭಾ ಸ್ಥಾನಗಳನ್ನು ಗೆದ್ದು ಸಾಧನೆ ಮಾಡಿದ್ದ ಬಿಜೆಪಿ ಇದೀಗ ರಾಜ್ಯದ ನಗರಸಭೆಯೊಂದರಲ್ಲಿ ಅಧಿಕಾರಕ್ಕೇರುವಲ್ಲಿ ಸಫಲವಾಗಿದೆ. ತನ್ಮೂಲಕ ಬಂಗಾಳದ ನಗರ ಸ್ಥಳೀಯ ಸಂಸ್ಥೆಯೊಂದರಲ್ಲಿ ಇದೇ ಮೊದಲ ಬಾರಿಗೆ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿದೆ.

ಕಳೆದ ವಾರ 50 ನಗರಸಭೆ ಸದಸ್ಯರು ತೃಣಮೂಲ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಅದರಲ್ಲಿ ಬ್ಯಾರಕ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಭಾಟ್‌ಪಾರಾ ನಗರಸಭೆ ಸದಸ್ಯರೂ ಇದ್ದರು. 34 ಸದಸ್ಯ ಬಲದ ಈ ನಗರಸಭೆಗೆ ಮಂಗಳವಾರ ಚುನಾವಣೆ ನಡೆದಿದ್ದು, 26 ಮತಗಳೊಂದಿಗೆ ಬಿಜೆಪಿಯ ಸೌರವ್‌ ಸಿಂಗ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸೌರವ್‌ ಸಿಂಗ್‌ ಅವರು ಬ್ಯಾರಕ್‌ಪುರ ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಅವರ ಸಂಬಂಧಿ. 4 ಬಾರಿ ತೃಣಮೂಲ ಕಾಂಗ್ರೆಸ್‌ನಿಂದ ಭಾಟ್‌ಪಾರಾ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿಬಂದಿದ್ದ ಅರ್ಜುನ್‌ ಸಿಂಗ್‌, 2010ರಿಂದ ನಗರಸಭೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮಾಚ್‌ರ್‍ನಲ್ಲಿ ಬಿಜೆಪಿ ಸೇರಿದ್ದರು. ಏಪ್ರಿಲ್‌ನಲ್ಲಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.