ಬೆಂಗಳೂರು (ಅ.04):  ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಶೀತಲ ಸಮರ ಅಂತ್ಯಗೊಳಿಸುವ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಂಧಾನ ಪ್ರಯತ್ನ ನಡೆಸಿದರು.

ಗುರುವಾರ ಬೆಳಗ್ಗೆ ನಗರದ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕಟೀಲ್‌ ಕೆಲಕಾಲ ಸಮಾಲೋಚನೆ ನಡೆಸಿದ್ದು, ಇನ್ನು ಮುಂದೆ ಪಕ್ಷ ಹಾಗೂ ಸರ್ಕಾರದ ವಿವಿಧ ನೇಮಕಗಳಲ್ಲಿ ಪರಸ್ಪರ ಚರ್ಚೆ ನಡೆಸಿ ಒಮ್ಮತದ ನಿರ್ಧಾರ ಕೈಗೊಳ್ಳಲು ಉಭಯ ನಾಯಕರು ಸಹಮತಕ್ಕೆ ಬಂದಿದ್ದಾರೆ.

ಆರಂಭದಲ್ಲೇ ಯಡಿಯೂರಪ್ಪ ಅವರು ಇತ್ತೀಚಿನ ಕಟೀಲ್‌ ಅವರ ಕೆಲವು ನಿರ್ಧಾರಗಳ ಬಗ್ಗೆ ನೇರವಾಗಿಯೇ ಅಸಮಾಧಾನ ಹೊರಹಾಕಿ, ನೀವು ಮಾಡಿದ್ದು ಸರಿಯಲ್ಲ ಎಂದು ತುಸು ಏರಿದ ಧ್ವನಿಯಲ್ಲೇ ಹೇಳಿದರು. ಮೇಯರ್‌ ಆಯ್ಕೆ ವಿಷಯದಲ್ಲಿ ಶಾಸಕ ಎಸ್‌.ರಘು ನೇತೃತ್ವದ ಸಮಿತಿ ರಚಿಸಿದ ನಂತರ ನೀವು ಸಮಿತಿ ರಚಿಸಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಖಾರವಾಗಿಯೇ ಪ್ರಶ್ನಿಸಿದರು ಎನ್ನಲಾಗಿದೆ.

ಈ ಹಂತದಲ್ಲಿ ಮೃದು ಧ್ವನಿಯಲ್ಲಿ ಮಾತನಾಡಿದ ಕಟೀಲ್‌, ಈ ವಿಷಯದಲ್ಲಿ ತಪ್ಪಾಗಿದೆ. ನಾನು ಆ ರೀತಿ ಪತ್ರಿಕಾ ಹೇಳಿಕೆ ನೀಡಬಾರದಿತ್ತು ಎಂದು ನಂತರ ನನಗೆ ಅನ್ನಿಸಿತು. ಈಗ ಆಗಿದ್ದು ಆಗಿಹೋಗಿದೆ. ಮುಂದೆ ಇಂಥ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸುವೆ. ಸರ್ಕಾರ ಮತ್ತು ಪಕ್ಷ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಒಳ್ಳೆಯ ಹೆಸರು ಬರುತ್ತದೆ. ಇಲ್ಲದಿದ್ದರೆ ಕೆಟ್ಟಸಂದೇಶ ರವಾನೆಯಾಗುತ್ತದೆ ಎಂದರು.

ನೀವು ಯಾರದ್ದೋ ಮಾತು ಕೇಳಿ ನಿಮ್ಮದೇ ರೀತಿ ಸಾಗುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನೀವು ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿ. ನಾನು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತೇನೆ ಎಂದೂ ಯಡಿಯೂರಪ್ಪ ಮಾತಿನ ನಡುವೆ ತೀಕ್ಷ$್ಣವಾಗಿ ಹೇಳಿದರು. ಅದಕ್ಕೆ ತಕ್ಷಣ ಉತ್ತರಿಸಿದ ಕಟೀಲ್‌, ನಿಮ್ಮನ್ನು ಬಿಟ್ಟು ಪಕ್ಷ ಸಂಘಟನ ಮಾಡುವುದಿಲ್ಲ. ನಿಮ್ಮ ಮಾರ್ಗದರ್ಶನ ಅಗತ್ಯ. ಇನ್ನು ಮುಂದೆ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಪಕ್ಷ ಸಂಘಟನೆ ಮಾಡುವೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಯಾವುದೇ ಭಿನ್ನಾಭಿಪ್ರಾಯಗಳಿಲ್ಲ- ಕಟೀಲ್‌:

ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್‌ಕುಮಾರ್‌ ಕಟೀಲ್‌, ನನ್ನ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇ ಪಕ್ಷ ಬಲಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ನನಗೆ ಯಡಿಯೂರಪ್ಪನವರೇ ಮಾರ್ಗದರ್ಶಕರು. ನಾವು ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ. ಕಳೆದ ಏಳೆಂಟು ದಿನಗಳಿಂದ ಮುಖ್ಯಮಂತ್ರಿಗಳು ಮತ್ತು ನಾನು ಪ್ರತ್ಯೇಕವಾಗಿ ರಾಜ್ಯ ಪ್ರವಾಸದಲ್ಲಿದ್ದೆವು. ಹಾಗಾಗಿ ಪರಸ್ಪರ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಭೇಟಿಯಾಗಿ ಪಕ್ಷದ ಸಂಘಟನೆ ಕುರಿತು ಸಮಾಲೋಚಿಸಿದ್ದೇನೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಘಟಕದ ಕೆಲ ಪದಾಧಿಕಾರಿಗಳ ಬದಲಾವಣೆ ವಿಚಾರದಲ್ಲಿ ನನ್ನ ಮತ್ತು ಯಡಿಯೂರಪ್ಪನವರ ಮಧ್ಯೆ ಗೊಂದಲಗಳು ಮೂಡಿಲ್ಲ. ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಜಾರಿಯಲ್ಲಿದೆ. ಅದರಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಶಾಸಕ ಸಿ.ಟಿ.ರವಿ ಅವರು ಸಚಿವರಾದ ಬಳಿಕ ಅವರಿಂದ ತೆರವಾದ ಸ್ಥಾನಕ್ಕೆ ಮಹೇಶ್‌ ಟೆಂಗಿನಕಾಯಿ ಅವರನ್ನು ನೇಮಿಸಲಾಯಿತು. ಇದರಲ್ಲಿ ಬೇರೇನೂ ವಿಶೇಷವಿಲ್ಲ ಎಂದು ಸಮರ್ಥಿಸಿಕೊಂಡರು.

ಗುಲಗುಂಜಿಯಷ್ಟೂ ಭಿನ್ನಾಭಿಪ್ರಾಯವಿಲ್ಲ- ಬಿಎಸ್‌ವೈ:

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ನನ್ನ ನಡುವೆ ಗುಲಗುಂಜಿಯಷ್ಟೂಭಿನ್ನಾಭಿಪ್ರಾಯವಿಲ್ಲ. ನಾವು ಒಗ್ಗಟ್ಟಿನಿಂದ ಪಕ್ಷ ಸಂಘಟಿಸುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಕಟೀಲ್‌ ಜೊತೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಡುವೆ ಭಿನ್ನಮತವೂ ಇಲ್ಲ, ಅಸಮಾಧಾನವೂ ಇಲ್ಲ. ಕೆಲ ಮಾಧ್ಯಮಗಳಲ್ಲಿ ಬಿಜೆಪಿ ಅಧ್ಯಕ್ಷ ಕಟೀಲ್‌ ಮತ್ತು ಯಡಿಯೂರಪ್ಪನವರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಸುದ್ದಿ ಬಿತ್ತರವಾಗುತ್ತಿದೆ. ಈ ರೀತಿ ಪ್ರಚಾರ ಸರಿಯಲ್ಲ. ನಮ್ಮಿಬ್ಬರ ಮಧ್ಯೆ ಗುಲಗುಂಜಿಯಷ್ಟೂಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಮನೆಗೆ ಬಂದಿದ್ದ ಕಟೀಲ್‌ ಅವರೊಂದಿಗೆ ಉಪಾಹಾರ ಸೇವಿಸಿ ಇತ್ತೀಚಿನ ರಾಜಕೀಯ ಹಾಗೂ ಪಕ್ಷದ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದ್ದೇನೆ. ರಾಜ್ಯದಲ್ಲಿ ಪಕ್ಷ ಮತ್ತಷ್ಟುಬಲವರ್ಧನೆಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗಟಿನಿಂದ ಕೆಲಸ ಮಾಡಲು ನಿಶ್ಚಯಿಸಿದ್ದೇವೆ ಎಂದು ತಿಳಿಸಿದರು.

ಬಿಬಿಎಂಪಿ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆಯ ಸಂದರ್ಭದಲ್ಲೂ ನನ್ನ ಜತೆ ಚರ್ಚಿಸಿಯೇ ರಾಜ್ಯಾಧ್ಯಕ್ಷರು ತೀರ್ಮಾನ ಕೈಗೊಂಡಿದ್ದಾರೆ. ಬೇರೆ ಕಾರಣಗಳಿಗೆ ಪಕ್ಷ ತೊರೆದ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಬಗ್ಗೆ ರಾಜ್ಯಾಧ್ಯಕ್ಷರ ಜತೆ ಸಮಾಲೋಚಿಸಿದ್ದೇನೆ ಎಂದ ಮುಖ್ಯಮಂತ್ರಿಗಳು, ಪಕ್ಷ ಬಿಟ್ಟಿರುವ ಬಿಜೆಪಿ ನಾಯಕರು ಮರಳಿ ಪಕ್ಷಕ್ಕೆ ಬರಬೇಕು ಎಂದು ಮನವಿ ಮಾಡಿದರು.