ಬೆಂಗಳೂರು[ಜೂ.26]:  ನಾನು ಮತ್ತು ಬೊಮ್ಮಾಯಿ‌ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ಅಹಮದಾಬಾದ್'ಗೆ  ಭೇಟಿ ನೀಡಿದ್ದೆವು ವಿನಃ ಬೇರೆ ವಿಚಾರ ಏನೂ ಚರ್ಚೆ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾರ್ಯಕಾರಿಣಿ ವಿಚಾರವಾಗಿ ಮಾತನಾಡಲು ಹೋಗಿದ್ದೆವು. ಬೇರೆ ವಿಚಾರ ಏನೂ ಚರ್ಚೆ ಆಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬುದು ಪ್ರಧಾನಿ ಮತ್ತು ರಾಷ್ಟ್ರೀಯ ಅಧ್ಯಕ್ಷರ ಇಚ್ಛೆಯಾಗಿದೆ. ರಾಜ್ಯ ಸರ್ಕಾರದ ಜಂಜಾಟಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಸಿದ್ದರಾಮಯ್ಯ ಒಂದು ಮಾತು ಹೇಳ್ತಿದ್ದಾರೆ, ಕುಮಾರಸ್ವಾಮಿ ಇನ್ನೊಂದು ಮಾತು ಹೇಳ್ತಿದ್ದಾರೆ. ಸರ್ಕಾರದಲ್ಲಿ ಯಾವುದೇ ಕೆಲಸ ಆಗ್ತಿಲ್ಲ, ಇನ್ನೂ ಅಧಿವೇಶನದ ಅಧಿಸೂಚನೆ ಹೊರಬಿದ್ದಿಲ್ಲ, ಶಾಸಕರಿಗೂ ಮಾಹಿತಿ ಇಲ್ಲ. ಬೆಳವಣಿಗೆಗಳನ್ನು ಮೌನವಾಗಿ ಗಮನಿಸದೆ ಹೊರತು ಯಾವುದೇ ಪ್ರತಿಕ್ರಿಯೆ ಕೊಡಬೇಡಿ ಎಂದು ನಮ್ಮ ಪಕ್ಷದ ಮುಖಂಡರು ‌ಮತ್ತು ಶಾಸಕರಿಗೆ ಹೇಳಿದ್ದೇನೆ ಎಂದರು. 

ಜೂನ್ 29 ರಂದು ನಡೆಯುವ ಕಾರ್ಯಕಾರಿಣಿಗೆ ಆಹ್ವಾನ ಮಾಡಿದ್ದೇವೆ. ಸಾಧ್ಯವಾದರೆ ಬರುತ್ತೇವೆ ಇಲ್ಲದಿದ್ದರೆ ಬೇರೆ ನಾಯಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಅವಧಿಗೂ ಮುನ್ನ ಲೋಕಸಭಾ ಚುನಾವಣೆಯ ಯಾವುದೇ ವಿಚಾರ ಇಲ್ಲ. ಲೋಕಸಭೆಯ ಉಪಚುನಾವಣೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ, ಹಾಗಾಗಿ ಇನ್ನೂ ಅಭ್ಯರ್ಥಿಗಳ ತೀರ್ಮಾನ ಆಗಿಲ್ಲ. ವಿಧಾನ ಪರಿಷತ್ ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಕಾರ್ಯಕಾರಿಣಿ ವೇಳೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.