ಬೆಂಗಳೂರು [ಜು.22] :  ಮೈತ್ರಿಕೂಟದ ಶಾಸಕರಿಗೆ ಹಣದ ಆಮಿಷವೊಡ್ಡಿ ಬಲೆಗೆ ಬೀಳಿಸಿರುವ ಬಿಜೆಪಿಯವರು ರಾಜಕೀಯ ವ್ಯಭಿಚಾರದಲ್ಲಿ ತೊಡಗಿದ್ದಾರೆ. ಬರೋಬ್ಬರಿ ಒಂದು ಸಾವಿರ ಕೋಟಿ ರು. ಖರ್ಚು ಮಾಡಿ ಹೊಸ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಪಾದಿಸಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಣದ ಆಮಿಷವೊಡ್ಡಿ ಕಾಂಗ್ರೆಸ್‌ ಜೆಡಿಎಸ್‌ ಶಾಸಕರನ್ನು ಬಲೆಗೆ ಬೀಳಿಸಿಕೊಂಡು ಮೈತ್ರಿ ಸರ್ಕಾರ ಕೆಡವಲು ಪ್ರಯತ್ನಿಸಿದ್ದಾರೆ. ನಂತರ 1000 ಕೋಟಿ ರು. ಖರ್ಚು ಮಾಡಿ ಹೊಸ ಸರ್ಕಾರ ರಚಿಸಲೂ ಮುಂದಾಗಿದ್ದಾರೆ. ಇದು, ನಾನು ಇದನ್ನು ಸುಮ್ಮನೆ ಹೇಳುತ್ತಿಲ್ಲ. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಮ್ಮ ಪಕ್ಷದ ಅತೃಪ್ತ ಶಾಸಕ ಬಿ.ಸಿ.ಪಾಟೀಲ್‌ ಅವರೊಂದಿಗೆ ಮಾತನಾಡಿದ ಆಡಿಯೋದಲ್ಲಿರುವ ಅಂಶವನ್ನು ಹೇಳುತ್ತಿದ್ದೇನೆ ಎಂದರು.

ಬಿಜೆಪಿಯವರು ಏನೇ ಮಾಡಿದರೂ ಸೋಮವಾರ ವಿಶ್ವಾಸಮತ ಯಾಚನೆಯಲ್ಲಿ ನಾವು ಗೆಲ್ಲುತ್ತೇವೆ. ನಮ್ಮ ಪಕ್ಷದ ಶಾಸಕರು ಬಹಳ ಉತ್ಸಾಹದಿಂದ ಇದ್ದಾರೆ. ಬಿಜೆಪಿಯವ ವಾಮಮಾರ್ಗದ ಬಗ್ಗೆ ಅವರ ಪಕ್ಷದ ಶಾಸಕರಲ್ಲೇ ಬೇಸರವಿದೆ ಎಂದರು.

ಸುಪ್ರೀಂ ಅರ್ಜಿ ವಿಚಾರಣೆಗೆ : ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಾವು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬರಬೇಕು. ನ್ಯಾಯಾಲಯ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳುತ್ತೋ ಇಲ್ಲವೋ? ವಿಚಾರಣೆಗೆ ಬಂದರೆ ಏನು ಹೇಳುತ್ತದೆ ನೋಡೋಣ ಎಂದು ಇದೇ ವೇಳೆ ದಿನೇಶ್‌ ಹೇಳಿದರು.

ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕು. ಸಂವಿಧಾನದ ಪರಿಚ್ಛೇದ 10ರಲ್ಲಿರುವ ಅಂಶ ಚರ್ಚೆ ಆಗಬೇಕು. ವಿಶ್ವಾಸಮತ ಯಾಚನೆ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಅವರು ಕ್ರಿಯಾಲೋಪ ಎತ್ತಿದ್ದಾರೆ. ಕ್ರಿಯಾಲೋಪದ ಎತ್ತಿರುವ ಶೆಡ್ಯೂಲ್‌ 10ರ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲದ ಕಾರಣ ವಿಶ್ವಾಸಮತಯಾಚನೆ ಮುಂದಕ್ಕೆ ಹಾಕಬೇಕು ಎಂದಿದ್ದಾರೆ. ನೋಡೋಣ ಏನಾಗುತ್ತದೆ ಎಂದರು.

ನಾವು ವಿಧಾನಸಭೆಯಲ್ಲಿ ಕಾಲ ಹರಣ ಮಾಡಿಲ್ಲ. ಉತ್ತಮವಾಗಿ ಚರ್ಚೆ ಮಾಡಿದ್ದೇವೆ. ಸದನದಲ್ಲಿ ವಿಶ್ವಾಸಮತ ಯಾಚನೆ ಗೊತ್ತುವಳಿ ಮಂಡನೆಯಾದ ಮೇಲೆ ರಾಜ್ಯಪಾಲರು ಅದು ಇಂತಿಷ್ಟೇ ಕಾಲಮತಿಯಲ್ಲಿ ಮಾಡಿ ಎಂದು ಹೇಳಬಾರದಿತ್ತು. ಇದು ವಿಧಾನಸಭೆ ಕಾರ್ಯಕಲಾಪದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಿದಂತಾಗುತ್ತದೆ. ವಿಶ್ವಾಸ ಮತಯಾಚನೆ ಮೇಲಿನ ಚರ್ಚೆ ಮೇಲೆ ನಮ್ಮ ಶಾಸಕರು ಸರ್ಕಾರ ಹಾಗೂ ತಾವು ಏನೇನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಹೇಳಬಾರದಾ ಎಂದು ಪ್ರಶ್ನಿಸಿದರು.

ಬಿಎಸ್‌ಪಿ ಬೆಂಬಲ:  ಬಿಎಸ್‌ಪಿ ಅದಿನಾಯಕಿ ಮಾಯಾವತಿ ಅವರು ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪರ ಮತ ಚಲಾಯಿಸುವಂತೆ ತಮ್ಮ ಪಕ್ಷದ ರಾಜ್ಯ ಶಾಸಕ ಎನ್‌.ಮಹೇಶ್‌ ಅವರಿಗೆ ಸ್ಷಷ್ಟಆದೇಶ ಮಾಡಿದ್ದಾರೆ. ಹಾಗಾಗಿ ಮಹೇಶ್‌ ಅವರು ಸೋಮವಾರ ಸದನಕ್ಕೆ ಹಾಜರಾಗಿ ಸರ್ಕಾರದ ಪರ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.