ನವದೆಹಲಿ (ಡಿ. 16): ಭಾರತದ ಹೆಚ್ಚುಗಾರಿಕೆ ಇರುವುದು ಅದರ ಬಹುಸಂಖ್ಯಾತ ಸಮುದಾಯದ ಜನರು ತಾವು ಹಿಂದುಗಳು ಎಂದು ಮತ ಹಾಕದೆ ಭಾರತೀಯರು ಎಂದು ಮತ ಹಾಕುವುದರಲ್ಲಿ ಎಂದು ಈ ಅಂಕಣವು ಒಂದಕ್ಕಿಂತ ಹೆಚ್ಚು ಸಲ ಹೇಳಿದೆ. ಇದನ್ನು ಹೆಚ್ಚು ನಾಟಕೀಯವಾಗಿ ಮತ್ತು ಸಮಾಧಾನದಿಂದ- ದೃಢವಾಗಿ ಇತ್ತೀಚಿನ ಚುನಾವಣೆಯ ಫಲಿತಾಂಶಗಳು ನಿಜ ಮಾಡಿವೆ.

ಈ ನಾಟಕವು ಮೂಲ ಜನಸಂಖ್ಯೆಯ ಅಂಕಿಅಂಶಗಳನ್ನು ಹೊಂದಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳು ಹಿಂದು ಭಾರತದ ಹೃದಯಸ್ಥಾನ. ರಾಜಸ್ಥಾನದ ಜನಸಂಖ್ಯೆಯಲ್ಲಿ ಶೇ.89 ರಷ್ಟು ಜನರು ಹಿಂದುಗಳು. ಮಧ್ಯಪ್ರದೇಶದಲ್ಲಿ ಶೇ.90 ರಷ್ಟು ಮತ್ತು ಛತ್ತೀಸ್ ಗಢದಲ್ಲಿ ಶೇ.93 ರಷ್ಟು ಜನರು ಹಿಂದುಗಳು.

ವಿಚಿತ್ರವೆಂದರೆ ಉತ್ತರ ಪ್ರದೇಶದಲ್ಲಿ ಶೇ.80 ರಷ್ಟು ಜನರು ಮಾತ್ರ ಹಿಂದುಗಳು. ಬಿಹಾರದಲ್ಲಿ ಶೇ.83 ರಷ್ಟು ಹಿಂದುಗಳು. ಇದರರ್ಥ ಅತಿ ಹೆಚ್ಚು ಸಂಖ್ಯೆಯ ಹಿಂದುಗಳಿರುವ ರಾಜ್ಯಗಳು ಬಿಜೆಪಿಯನ್ನು ತಿರಸ್ಕರಿಸಿವೆ ಎಂದೂ ಆಗಬಹುದು!
ಎಂದಿನಂತೆ ಈ ಬಾರಿಯೂ ಚುನಾವಣಾ ಯಶಸ್ಸಿಗಾಗಿ ಬಿಜೆಪಿಯು ಹಿಂದುತ್ವದ ಕೂಗನ್ನು ಎಬ್ಬಿಸಿತು ಎಂಬುದನ್ನು ನೆನಪು ಮಾಡಿಕೊಳ್ಳಿ. ವಿಎಚ್ ಪಿಯು ದೆಹಲಿಯಲ್ಲಿ ಬೃಹತ್ ರ‌್ಯಾಲಿ ನಡೆಸಿ ಅಯೋಧ್ಯೆಯಲ್ಲಿ ವಿಳಂಬ ಮಾಡದೆ ರಾಮ
ಮಂದಿರವನ್ನು ನಿರ್ಮಿಸಬೇಕು ಎಂದು ಒತ್ತಾಯಿಸುವ ಮೂಲಕ ತನ್ನ ಪಾಲನ್ನೂ ಸೇರಿಸಿತು.

ಆದರೆ ಮತೀಯ ರಾಜಕಾರಣ ಮಾಡುವುದಕ್ಕೆ ಸರಳ, ಸಾಮಾನ್ಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ಅಸಮ್ಮತಿ ತೋರಿಸಿದರು. ಅವರ ಕ್ರಿಯೆಯು ಭಾರತವನ್ನು, ಹಾಗೆಯೇ ಹಿಂದು ಧರ್ಮವನ್ನೂ ಬಲಪಡಿಸಿತು. ಹಿಂದುತ್ವದ ಧ್ರುವೀಕರಣವು ರಾಜಕೀಯವನ್ನು ಬಯಲಿಗಿಟ್ಟಿತು.

ತನ್ನ 3 ಬಲಗಳು ಅಜೇಯ ಎಂದುಕೊಂಡಿದ್ದ ಬಿಜೆಪಿಗೆ ಈ ಫಲಿತಾಂಶವು ಆಘಾತವನ್ನುಂಟು ಮಾಡಿದೆ. ಒಂದು ಪ್ರಧಾನಿಯವರ ಅದ್ಭುತವಾದ ಭಾಷಣ ಕಲೆ, ಎರಡನೆಯದು ಶತಾಯಗತಾ  ಗೆಲ್ಲಲೇಬೇಕೆಂಬ ಪಕ್ಷದ ಅಧ್ಯಕ್ಷರ ಸಿದ್ಧಾಂತ ಮತ್ತು ಮೂರನೆಯದು ಕಾನೂನು ಪಾಂಡಿತ್ಯದಲ್ಲಿ ನಿಷ್ಣಾತ ಹಣಕಾಸು ಸಚಿವ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಸರಿಸಾಟಿಯಿಲ್ಲದವರು. ಆದರೆ ಅವರೆಲ್ಲರ ಒಂದು ದೌರ್ಬಲ್ಯ- ಅತಿಯಾದ ಆತ್ಮವಿಶ್ವಾಸ. ಅದು ಅವರನ್ನು ತಾವು ಯಾವಾಗಲೂ ಸರಿ ಎಂದು ನಂಬುವಂತೆ ಮಾಡಿತ್ತು.

ನಿರಂತರವಾಗಿ ಜವಾಹರಲಾಲ್ ನೆಹರು ಅವರನ್ನು ಅವಹೇಳನ ಮಾಡುವ ಮೂಲಕ ಪ್ರಧಾನಿ ತಪ್ಪು ಮಾಡಿದರು. ದೇಶದ ಪ್ರಥಮ ಪ್ರಧಾನ ಮಂತ್ರಿಯು ತಪ್ಪುಗಳನ್ನು ಮಾಡಿದ್ದಾರೆ, ಆದರೆ ಪ್ರತಿಮೆಯನ್ನು ನಿರ್ಮಿಸುವುದರಿಂದ ಮತ್ತು ಭಾಷಣ ಮಾಡುವುದರಿಂದ ಬಿಜೆಪಿಯು ಆಧುನಿಕ ಭಾರತ ನಿರ್ಮಾಪಕನ ಐತಿಹಾಸಿಕ ಮಹತ್ವಕ್ಕೆ ಮುಕ್ಕುಂಟು ಮಾಡುವುದು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾವುಗಳು, ಮುಂಗುಸಿಗಳು, ನಾಯಿಗಳು, ಬೆಕ್ಕುಗಳ ಹೇಳಿಕೆ ನೀಡಿ ತಪ್ಪು ಮಾಡಿದರು. ಈಗ ಆ ಹಾವು ಮತ್ತಿತರವುಗಳಿಗೆ ಜನರು ಒಪ್ಪಿಗೆಯನ್ನು ನೀಡಿದ್ದಾರೆ.

ಈ ಪಕ್ಷದ ಮುಖ್ಯಸ್ಥರನ್ನು ಬಹುಸಂಖ್ಯಾತ ಹಿಂದುಗಳೂ ಸೇರಿದಂತೆ ಈ ದೇಶದ ನಾಗರಿಕರ ಕಣ್ಣಿನಿಂದ ನೋಡುವುದಾದರೆ ಅವರು ವೈಭವೀಕರಿಸಲಾದ ತಂತ್ರಗಾರ ಹೊರತು ಬೇರೇನೂ ಅಲ್ಲ. ಇವರಲ್ಲಿ ಹೆಚ್ಚು ಮಿದುಳಿರುವ ವ್ಯಕ್ತಿ ಅರುಣ
ಜೇಟ್ಲಿ. ಹೀಗಾಗಿ ಅವರು ಮಾಡುವ ಕೆಲಸಗಳ ಪರಿಣಾಮವೂ ತೀರಾ ಆಳಕ್ಕಿಳಿದಿರುತ್ತದೆ. ನರೇಂದ್ರ ಮೋದಿಯವರು ದಾಕ್ಷಿಣ್ಯಕ್ಕೆ ಸಿಕ್ಕಿಬೀಳುವ ಬಿಜೆಪಿಯ ಏಕೈಕ ನಾಯಕ ಎಂದರೆ ಇವರು. ಮತ್ತು ಅದು ಒಳ್ಳೆಯ ಕಾರಣಕ್ಕೆ. ಮೋದಿಯವರನ್ನು ಗುಜರಾತ್ನ ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕೆ ಮೊದಲು ವಿರೋಧಿಸಿದವರೇ ಜೈಟ್ಲಿಯಾಗಿದ್ದರು.

ಗುಜರಾತ್‌ನ ದಂಗೆಗಳಿಗಾಗಿ ಮೋದಿಯವರನ್ನು ‘ಶಿಕ್ಷಿಸಲು’ ಪ್ರಧಾನಿಯಾಗಿದ್ದ ವಾಜಪೇಯಿಯವರು ಒಲವು ಹೊಂದಿದ್ದಾಗ ಮೋದಿಯವರನ್ನು ಸಮರ್ಥಿಸಿಕೊಂಡಿದ್ದು ಇದೇ ಜೈಟ್ಲಿಯವರಾಗಿದ್ದರು. ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಸುಷ್ಮಾ ಸ್ವರಾಜ್ ಅವರು ಆಕ್ಷೇಪಗಳನ್ನು ಹೊಂದಿದ್ದರೂ ಮೋದಿಯವರನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾವ ಮಾಡಿದ್ದು ಜೈಟ್ಲಿಯವರೇ. ಒಂದೂ ಚುನಾವಣೆಯನ್ನು ಗೆಲ್ಲದಿದ್ದರೂ ಮೋದಿ
ಸರ್ಕಾರದಲ್ಲಿ ಜೈಟ್ಲಿ ಅತ್ಯಂತ ಪ್ರಭಾವಶಾಲಿ ಸಚಿವರಾಗಿರುವುದರಲ್ಲಿ ಆಶ್ಚರ್ಯವಿಲ್ಲ.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಗಮನಾರ್ಹ ರಾಜಕೀಯ ನಡೆಯೂ ಜೈಟ್ಲಿಯವರ ಮುದ್ರೆಯೊಂದಿಗೇ ಹೊರಬಂದಿದೆ. ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಹರಿದು ಬರುವುದನ್ನು ಒಂದು ವ್ಯವಸ್ಥೆಗೊಳಪಡಿಸುವುದಕ್ಕಾಗಿ ಮತದಾರರ ಬಾಂಡ್ ಹೊರಡಿಸುವ ಸುತ್ತು-ಬಳಸುದಾರಿಯ ವಿಚಾರವೂ ಇವರದ್ದೇ. ಸ್ವತಃ ಚುನಾವಣಾ ಆಯೋಗವೇ ಇದಕ್ಕೆ ಆಕ್ಷೇಪವೆತ್ತಿತ್ತು. ಆದರೆ ಜೇಟ್ಲಿ ಅದನ್ನು ನಿರ್ಲಕ್ಷಿಸಿದರು. ರಿಸರ್ವ್ ಬ್ಯಾಂಕನ್ನು ಸರ್ಕಾರದ ನಿಯಂತ್ರಣಕ್ಕೆ ತರಲು ಅವರು ಅವಿಶ್ರಾಂತವಾಗಿ ಕೆಲಸ ಮಾಡಿದರು.

ಊರ್ಜಿತ್ ಪಟೇಲ್ ಅವರ ರಾಜೀನಾಮೆಯು ರಘುರಾಮ್ ರಾಜನ್‌ರಿಗಿಂತ ಹೆಚ್ಚು ಆಘಾತಕಾರಿಯಾಗಿತ್ತು. ಏಕೆಂದರೆ ಪಟೇಲ್ ಆರಂಭದಲ್ಲಿ ಹೇಳಿದಂತೆ ಕೇಳುವ ವಿಧೇಯನಂತೆ ತೋರಿಸಿಕೊಂಡಿದ್ದರು. ಪ್ರಮಾಣ ಪೂರ್ವಕವಾಗಿ\ ಅವರು ಕೂಡ ಸರ್ಕಾರದ ಬೇಡಿಕೆ ಸ್ವೀಕಾರಾರ್ಹವಲ್ಲ ಎಂದು ಕಂಡುಕೊಂಡರು. ಸರ್ಕಾರದ ರಾಜಕೀಯ ಪ್ರೇರಿತ ಯೋಜನೆಗಳ ವೆಚ್ಚಕ್ಕೆ ರಿಸರ್ವ್ ಬ್ಯಾಂಕ್‌ನ ಆಸ್ತಿಯನ್ನು ಬಳಸಿಕೊಳ್ಳುವುದಕ್ಕಾಗಿ ಈ ಬೇಡಿಕೆಯನ್ನು ಮಂಡಿಸಲಾಗಿತ್ತು. ರಿಸರ್ವ್
ಬ್ಯಾಂಕ್‌ನ ಸ್ವಾಯತ್ತೆ ಮತ್ತು ಆಸ್ತಿಯ ವಿಚಾರದಲ್ಲಿ ಬೇರಾವುದೇ ಹಣಕಾಸು ಸಚಿವರು ಸ್ವಾತಂತ್ರ್ಯವನ್ನು ತೆಗೆದುಕೊಂಡಿರಲಿಲ್ಲ.

ದೇಶದ ಅರ್ಥವ್ಯವಸ್ಥೆಯ ಮೂಲಭೂತ ತತ್ವಗಳನ್ನೂ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ತಮಗೆ ಯಾವುದೇ ಅಳುಕು ಇಲ್ಲ ಎಂಬುದನ್ನು ಈ ಪ್ರಕ್ರಿಯೆಗಳ ಮೂಲಕ ಜೈಟ್ಲಿ ಸಿದ್ಧಪಡಿಸಿದರು. ಅವರ ಅಪನಗದೀಕರಣವು ಜನರ ಜೀವವನ್ನು ಅಭೂತಪೂರ್ವ ರೀತಿಯಲ್ಲಿ ಹೈರಾಣುಗೊಳಿಸಿತು. ಸರಕು ಮತ್ತು ಸೇವಾ ತೆರಿಗೆಯನ್ನು ಸರಳಗೊಳಿಸುವ ಬದಲಿಗೆ ಅದನ್ನು ಇನ್ನಷ್ಟು ಕ್ಲಿಷ್ಟಗೊಳಿಸಲಾಯಿತು. ಕೆಟ್ಟ ಸಾಲಗಳ ಮೇಲೆ ಕ್ರಮ ಕೈಗೊಳ್ಳದೇ ಇದ್ದುದರ ಲಾಭವನ್ನು ಉದ್ಯಮಿಗಳು ಪಡೆದುಕೊಂಡರು.

ಇವೆಲ್ಲವನ್ನೂ ಜೈಟ್ಲಿ ಸುದೀರ್ಘವಾಗಿ ಸಮರ್ಥಿಸಿಕೊಂಡರು. ಈ ಕ್ರಮಗಳು ಮಹೋನ್ನತವಾದದ್ದು ಎಂಬಂತೆ ಬಿಂಬಿಸಿದರು. ರಾಜಕೀಯದಲ್ಲಿ ಮತೀಯ ಭಾವೋದ್ರೇಕಕ್ಕೆ ಜಾಗವಿಲ್ಲ ಎಂದು ಜನರು ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಹೇಳಿದ್ದಾರೆ. ಬಿಜೆಪಿ ಇದಕ್ಕೆ ಕಿವಿಗೊಡುವುದೇ ಅಥವಾ ತಾನೇನು ಮಾಡುತ್ತಿದ್ದೇನೋ ಅದನ್ನು ಮುಂದುವರೆಸುವುದೇ? ದೆಹಲಿಯಲ್ಲಿ ಅಧಿಕಾರ ಅದರ ಕೈಯಲ್ಲಿ ಇನ್ನು ಮೂರು ತಿಂಗಳು ಇದೆ. ಅಧಿಕಾರವೆನ್ನುವುದು ಹಾವಿನ ತಲೆಯ ಭೂತವಿದ್ದಂತೆ ಮತ್ತು ವರ್ಷದ ಕಾಲು ಭಾಗವೆಂದರೆ ಸುದೀರ್ಘ ಅವಧಿಯೇ. ಮಹತ್ವಪೂರ್ಣ ದಿನಗಳು ಮುಂದಿವೆ. 

- ಟಿ ಜೆ ಎಸ್ ಜಾರ್ಜ್