ಕೋಲ್ಕತಾ[ಜೂ.10]: ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ದಾಖಲೆ ಬರೆದ ಹುಮ್ಮಸ್ಸಿನಲ್ಲಿರುವ ಬಿಜೆಪಿ, 2021ರಲ್ಲಿ ನಡೆಯಲಿರುವ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 250 ಸ್ಥಾನ ಗೆಲ್ಲಲು ನೀಲನಕ್ಷೆ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ.

ತೃಣಮೂಲ ಕಾಂಗ್ರೆಸ್‌ ಪದೇಪದೇ ಪ್ರಸ್ತಾಪಿಸುವ ಬಂಗಾಳದ ಹೆಮ್ಮೆ ವಿಚಾರಕ್ಕೆ ಸಡ್ಡು ಹೊಡೆಯಲು ಬಂಗಾಳಿಗಳ ಹಿತರಕ್ಷಣೆಗೆ ಹೋರಾಡುವ ಪಕ್ಷ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಮುಂದಾಗಿದೆ. ಉದ್ಯೋಗ ಸೃಷ್ಟಿಗಾಗಿ ಬಂಗಾಳದಲ್ಲಿ ಕೈಗಾರಿಕೀಕರಣಕ್ಕೆ ಒತ್ತು ನೀಡುವುದು, ಪೌರತ್ವ (ತಿದ್ದುಪಡಿ) ಮಸೂದೆ ಅನುಷ್ಠಾನ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಜಾರಿಗೆ ತರುವ ಭರವಸೆಯನ್ನು ನೀಡಲು ಮುಂದಾಗಿದೆ.

ತೃಣಮೂಲ ಕಾಂಗ್ರೆಸ್ಸಿನಿಂದ ವಲಸೆ ಬರುವ ನಾಯಕರ ಬಿಜೆಪಿ ಸೇರ್ಪಡೆಗೆ ಸದ್ಯ ಬ್ರೇಕ್‌ ಹಾಕಲು ಉದ್ದೇಶಿಸಿದೆ. ಪಕ್ಷ ಸೇರಲು ಬಯಸುವ ನಾಯಕರ ಪೂರ್ವಾಪರ ವಿಚಾರಿಸಿ, ಅವರು ಸಾರ್ವಜನಿಕವಾಗಿ ಉತ್ತಮ ಇಮೇಜ್‌ ಹೊಂದಿದ್ದರೆ, ಸಂಘಟನೆ ಶಕ್ತಿ ಇದ್ದರೆ ಮಾತ್ರ ಸೇರ್ಪಡೆ ಮಾಡಿಕೊಳ್ಳಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳು ಇವೆ. ಬಹುಮತಕ್ಕೆ 148 ಸ್ಥಾನ ಬೇಕು. ಲೋಕಸಭೆ ಚುನಾವಣೆಯಲ್ಲಿ ಶೇ.40.5ರಷ್ಟುಮತ ಗಳಿಸಿರುವ ಬಿಜೆಪಿ 130 ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್‌ ಪಡೆದಿದೆ. 65 ಕ್ಷೇತ್ರಗಳಲ್ಲಿ 2ನೇ ಸ್ಥಾನದಲ್ಲಿದೆ. ಹೀಗಾಗಿ ಬಂಗಾಳದಲ್ಲಿ 2021ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿ ಆ ಪಕ್ಷ ಇದೆ.