ನವದೆಹಲಿ[ಆ.01]: ಹಿಂದಿನ ವರ್ಷಕ್ಕೆ ಹೋಲಿಸಿದರೆ 2017-18ರಲ್ಲಿ ಬಿಜೆಪಿಯ ಸಂಸತ್ತು 1,213 ಕೋಟಿ ರು.ಗಳಿಂದ 1,483 ಕೋಟಿ ರು.ಗೆ ಏರಿಕೆಯಾಗಿದೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್‌)ಯ ವರದಿ ತಿಳಿಸಿದೆ.

ಬಿಜೆಪಿ, ಕಾಂಗ್ರೆಸ್‌, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ ಹಾಗೂ ಟಿಎಂಸಿ ಪಕ್ಷಗಳು 2017​-18ನೇ ಸಾಲಿಗೆ ಆಸ್ತಿ ವಿವರವನ್ನು ಘೋಷಿಸಿವೆ. ಏಳೂ ಪಕ್ಷಗಳ ಆಸ್ತಿ ಶೇ.6ರಷ್ಟುಅಂದರೆ, 3,456 ಕೋಟಿ ರು.ಗಳಿಂದ 3,260 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಿಜೆಪಿಯ ಆಸ್ತಿ ಶೇ.22ರಷ್ಟುಅಂದರೆ 1,213 ಕೋಟಿ ರು.ಗಳಿಂದ 1,483 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಬಿಜೆಪಿಗೆ 270 ಕೋಟಿ ರು. ಆದಾಯ ಹರಿದುಬಂದಿದೆ.

ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಪಕ್ಷಗಳ ಆಸ್ತಿ ಇಳಿಕೆ ಕಂಡಿದೆ. ಕಾಂಗ್ರೆಸ್‌ ಪಕ್ಷದ ಆಸ್ತಿ 854 ಕೋಟಿ ರು.ಗಳಿಂದ 724 ಕೋಟಿ ರು.ಗಳಿಗೆ ಇಳಿಕೆಯಾಗಿದೆ. ಅದೇ ರೀತಿ ಎನ್‌ಸಿಪಿಯ ಆಸ್ತಿ 11.41 ಕೋಟಿ ರು.ಗಳಿಂದ 9.54 ಕೋಟಿ ರು.ಗಳಿಗೆ ಇಳಿಕೆಯಾಗಿದೆ. ಆದರೆ, ಟಿಎಂಸಿಯ ಆಸ್ತಿ 10.86 ಕೋಟಿ ರು.ಗಳಿಂದ 26.25 ಕೋಟಿ ರು.ಗೆ ಏರಿದೆ.

ಇನ್ನೊಂದೆಡೆ ಬಿಎಸ್‌ಪಿಯ ಆಸ್ತಿ 680.63 ಕೋಟಿ ರು.ಗಳಿಂದ 716.72 ಕೋಟಿ ರು.ಗೆ ಏರಿದೆ. 463 ಕೋಟಿ ರು. ಇದ್ದ ಸಿಪಿಎಂ ಆಸ್ತಿ 482 ಕೋಟಿ ರು. ಆಗಿದೆ. ಸಿಪಿಐನ ಆಸ್ತಿ 10.88 ಕೋಟಿ ರು.ಗಳಿಂದ 11.49 ಕೋಟಿಗೆ ಏರಿದೆ.

ಇದೇ ವೇಳೆ ಕಾಂಗ್ರೆಸ್‌ 461 ಕೋಟಿ ರು. ಸಾಲ ಮಾಡಿದ್ದರೆ, ಬಿಜೆಪಿ 20.03 ಕೋಟಿ ರು. ಎರವಲು ಪಡೆದುಕೊಂಡಿದೆ ಎಂದು ಎಡಿಆರ್‌ ವರದಿ ತಿಳಿಸಿದೆ.