ಬಿಜೆಪಿಯಲ್ಲಿ ರಾತೋರಾತ್ರಿ ದಿಢೀರ್ ಬೆಳವಣಿಗೆಉಪಾದ್ಯಕ್ಷ ನಿರ್ಮಲ್ ಕುಮಾರ್ ಕೂಡಾ ಪದಚ್ಯುತಿಗೋ.ಮಧುಸೂದನ್, ರೇಣುಕಾಚಾರ್ಯಗೂ ಹುದ್ದೆ ಖೋತಾ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ವಿರುದ್ಧ ತಿರುಗಿಬಿದ್ದಿರುವ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಮತ್ತಿತರ ಅತೃಪ್ತರ ನಡುವಣ ತಿಕ್ಕಾಟ ನಿಗಿ ನಿಗಿ ಕೆಂಡವಾಗಿರುವಾಗಲೇ ರಾಜ್ಯ ಬಿಜೆಪಿಯಲ್ಲಿ ಶನಿವಾರ ರಾತ್ರಿ ದಿಢೀರ್‌ ಬೆಳವಣಿಗೆಗಳಾಗಿವೆ. ಭಿನ್ನಮತದ ಸಂಪೂರ್ಣ ಚಿತ್ರಣ ಪಡೆಯಲು ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್‌ ಹಾಗೂ ಯಡಿಯೂರಪ್ಪ ಭೇಟಿ ಬೆನ್ನಲ್ಲೇ ಪಕ್ಷದ ನಾಲ್ಕು ಪದಾಧಿಕಾರಿಗಳ ತಲೆದಂಡವಾಗಿದೆ.

ಇತ್ತೀಚೆಗೆ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಭಾನುಪ್ರಕಾಶ್‌, ನಿರ್ಮಲ ಕುಮಾರ್‌ ಸುರಾಣ, ರೈತ ಮೋರ್ಚಾ ಉಪಾಧ್ಯಕ್ಷ ರೇಣುಕಾಚಾರ್ಯ ಹಾಗೂ ರಾಜ್ಯ ವಕ್ತಾರ ಗೋ.ಮಧುಸೂದನ್‌ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅತೃಪ್ತರ ಬಣದಲ್ಲಿದ್ದ ಭಾನುಪ್ರಕಾಶ್‌ ಹಾಗೂ ಸುರಾಣ ಅವರನ್ನು ಶಿಸ್ತು ಉಲ್ಲಂಘನೆಯ ಕಾರಣಕ್ಕೆ ಕಿತ್ತೊಗೆಯಲಾಗಿದ್ದರೆ, ಪಕ್ಷದ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಶಿಸ್ತು ಪಾಲಿಸದ ಕಾರಣಕ್ಕಾಗಿ ಮಧುಸೂದನ್‌ ಹಾಗೂ ರೇಣುಕಾಚಾರ್ಯ ಅವರುಗಳನ್ನು ಪದಚ್ಯುತಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಮುರಳೀಧರ ರಾವ್‌ ಭೇಟಿ ಆಗದ ಈಶ್ವರಪ್ಪ:

ಬಿಜೆಪಿಯಲ್ಲಿ ಬಂಡಾಯದ ಕಹಳೆ ಊದಿರುವ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಅವರು ಅಭಿಪ್ರಾಯ ಸಂಗ್ರಹಿ ಸಲು ಆಗಮಿಸಿರುವ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರನ್ನು ಭೇಟಿ ಮಾಡುವ ಸಾಧ್ಯತೆ ಕಡಿಮೆ. ಶನಿವಾರ ಸಂಜೆ ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸಿದ ಈಶ್ವರಪ್ಪ ಅವರು ನಗರದಲ್ಲೇ ಇದ್ದರೂ ಬಿಜೆಪಿ ಕಚೇರಿಯತ್ತ ತೆರಳಲಿಲ್ಲ.

ಭಾನುವಾರವೂ ಮುರಳೀಧರರಾವ್‌ ಅವರು ಪಕ್ಷದ ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮುಂದುವರೆಸಿದರೂ ಈಶ್ವರಪ್ಪ ಅವರು ಭೇಟಿ ಮಾಡದೆ ಬೆಳಗ್ಗೆ ತುಮಕೂರಿಗೆ ತೆರಳಿ ಅಲ್ಲಿಂದ ಮಧ್ಯಾಹ್ನ ಶಿವಮೊಗ್ಗಕ್ಕೆ ತೆರಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಶನಿವಾರ ರಾತ್ರಿ ಪಕ್ಷದ ಕಚೇರಿಗೆ ಆಗಮಿಸಿ ಮುರಳೀಧರರಾವ್‌ ಅವರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು. ಭಾನುವಾರ ಮತ್ತು ಸೋಮವಾರ ಶಿವಮೊಗ್ಗ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.