ಹುಬ್ಬಳ್ಳಿ : ‘ಎಚ್‌.ಡಿ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ನಾನು. ಆದರೆ, ಅಪ್ಪ- ಮಕ್ಕಳಿಬ್ಬರೂ ನನಗೆ ಮೋಸ ಮಾಡಿದರು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಕುಂದಗೋಳದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ 20 ತಿಂಗಳ ಕಾಲ ಕುಮಾರಸ್ವಾಮಿಯನ್ನು ನಾನೇ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆ. ನಾನು ಎಂದಿಗೂ ಕುರ್ಚಿಗೆ ಅಂಟಿಕೊಂಡಿಲ್ಲ ಎಂದರು.

ಹಣ- ಹೆಂಡದ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂದು ರಾಜಕೀಯ ನಡೆಸುತ್ತಿರುವವರು ಕಾಂಗ್ರೆಸ್‌-ಜೆಡಿಎಸ್‌ನವರು. ಕುಮಾರಸ್ವಾಮಿ ಜನ ಹಿತ ಮರೆತಿದ್ದಾರೆ. ಭ್ರಷ್ಟಾಚಾರ ನಡೆಸುತ್ತಾ ಜನರ ಹಣ ಲೂಟಿ ಮಾಡಿದ್ದಾರೆ. ಬರವಿದ್ದರೂ ರೈತರ ಸಂಕಷ್ಟವನ್ನು ಯಾರೊಬ್ಬರೂ ಕೇಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನನ್ನತ್ತ ಕೆಸರು ಎರಚಿದಷ್ಟೂ ಕಮಲ ಅರಳುತ್ತೆ: ನರೇಂದ್ರ ಮೋದಿ

ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ನೋಟು ಪ್ರಿಂಟ್‌ ಮಾಡುವ ಮಷಿನ್‌ ಇಲ್ಲ ಎಂದು ಹೇಳಿದ್ದೇನೆ ಎಂಬ ಕಾಂಗ್ರೆಸ್ಸಿಗರ ಟೀಕೆ ಅರ್ಥವಿಲ್ಲದ್ದು. ನಾನು ಸಾಲ ಮನ್ನಾ ಮಾಡಿದ್ದೇನೆ. ಜಗದೀಶ ಶೆಟ್ಟರ್‌ ಸಿಎಂ ಆದಾಗಲೂ ಅವರು ಸಾಲ ಮನ್ನಾ ಮಾಡಿದ್ದರು ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಹೆಸರೆತ್ತದ ಬಿಜೆಪಿಗರು:

ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮುಖಂಡರೆಲ್ಲರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ, ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು. ಆದರೆ, ಎಲ್ಲೆಡೆ ಎದುರಾಳಿ ಅಭ್ಯರ್ಥಿ ವಿರುದ್ಧ ಅಬ್ಬರಿಸುತ್ತಿದ್ದ ಬಿಜೆಪಿ ನಾಯಕರು, ಕುಂದಗೋಳದಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಬಗ್ಗೆ ಮಾತ್ರ ಒಂದೇ ಒಂದು ಮಾತು ಆಡಲಿಲ್ಲ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಮಾತನಾಡುವ ವೇಳೆ, ಕುಂದಗೋಳ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವ ಮೂಲಕ ದಿ. ಸಿ.ಎಸ್‌. ಶಿವಳ್ಳಿ ಅವರ ಆತ್ಮಕ್ಕೆ ನಾವು ನಿಜವಾದ ಶಾಂತಿ ನೀಡಲಿದ್ದೇವೆ ಎಂದರು.

ಕೈಮುಗಿತೀನಿ ಗೆಲ್ಲಿಸಿ:

ಬಿ.ಎಸ್‌.ಯಡಿಯೂರಪ್ಪ ಮಾತನಾಡುವ ವೇಳೆ ಕುಂದಗೋಳ ಕ್ಷೇತ್ರದಲ್ಲಿ ಕಳೆದ ಬಾರಿ ಅತ್ಯಲ್ಪ ಮತಗಳಿಂದ ಸೋತಿರುವ ಎಸ್‌.ಐ.ಚಿಕ್ಕನಗೌಡರ ಮೇಲೆ ನಿಜವಾದ ಅನುಕಂಪವಿದೆ. ಚಿಕ್ಕನಗೌಡರನ್ನು ನೀವೆಲ್ಲ ಸೇರಿ ಈ ಸಲ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕಿದೆ. ಈ ಬಗ್ಗೆ ನನಗೆ ಮಾತು ಕೊಡಿ. ಬೊಮ್ಮಾಯಿ, ಎಂ.ಆರ್‌.ಪಾಟೀಲ ಎಂಬೆರಡು ಶಕ್ತಿ ಸೇರಿದರೆ ಚಿಕ್ಕನಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಮಗೆಲ್ಲ ಕೈ ಮುಗಿದು ಕೇಳುತ್ತೇನೆ. ಪ್ರತಿ ಬೂತ್‌ನಲ್ಲೂ ನಮಗೆ ಬಾರದ ಸುಮಾರು 10-15 ಮತಗಳನ್ನು ಈ ಸಲ ಹೆಚ್ಚಿಗೆ ಹಾಕಿಸಿಕೊಂಡು ಚಿಕ್ಕನಗೌಡರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕೈಮುಗಿದು ಬೇಡಿಕೊಂಡರು.