ಶೀಘ್ರದಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ. ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯ ನಾಯಕರಿಗೆ ಟಾಸ್ಕ್ ಗಳನ್ನು ನೀಡಿ ವಾಪಸಾಗಲಿದ್ದಾರೆ.
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿನ ಬಿರುಸಿನ ಬೆಳವಣಿಗೆಗಳು ಸಹಜ ಸ್ಥಿತಿಗೆ ಬಂದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬರುವ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಆಗಮಿಸಿ ಲೋಕಸಭಾ ಚುನಾವಣೆಯ ಸಿದ್ಧತೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬೀಳದೇ ಇದ್ದರೂ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಕ್ಟೋಬರ್‌ನಲ್ಲಿ ಬಂದು ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ‘ಟಾಸ್ಕ್’ ನೀಡಿ ವಾಪಸಾಗಲಿರುವ ಅಮಿತ್ ಶಾ ಅವರು ಮುಂದೆ ರಾಜಸ್ಥಾನ್, ಮಧ್ಯಪ್ರದೇಶ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಸಿಕೊಂಡು ಮತ್ತೆ ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಲೋಕಸಭಾ ಚುನಾವಣಾ ಪೂರ್ವಸಿದ್ಧತೆಗಾಗಿ ವಿವಿಧ ರಾಜ್ಯಗಳ ಭೇಟಿ ಈಗಾಗಲೇ ಮುಗಿಸಿರುವ ಅಮಿತ್ ಶಾ ಅವರು ಕಳೆದ ಎರಡು ತಿಂಗಳ ಹಿಂದೆಯೇ ಕರ್ನಾಟಕಕ್ಕೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತು.
ಕಳೆದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಹಲವು ತಿಂಗಳುಗಳ ಮುಂಚಿತವಾಗಿಯೇ ಆಗಮಿಸಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದಲ್ಲದೆ, ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ನಂತರ ಹೊರಡುವ ಮುನ್ನ ವಿವಿಧ ಹೊಣೆಗಳನ್ನು ವಹಿಸಿದ್ದರು. ಮುಂದೆ ಗುಜರಾತ್ ವಿಧಾನಸಭಾ ಚುನಾವಣೆ ಮುಗಿಸಿದ ನಂತರ ವಾಪಸು ಬಂದು ತಾವು ನೀಡಿದ್ದ ಟಾಸ್ಕ್‌ಗಳ ಪ್ರಗತಿ ಪರಿಶೀಲನೆ ನಡೆಸಿದ್ದರು. ಈಗಲೂ ಅದೇ ಹಾದಿ ತುಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ.
