ಬೆಂಗಳೂರು :  ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಸೇರಿದಂತೆ ಹಲವಾರು ಉದ್ಯಮ ನಡೆಸಲು ಜಿಂದಾಲ್‌ ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದ ಭೂಮಿ ಪರಭಾರೆ ಮಾಡುವ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಆಡಳಿತಾರೂಢ ಪಕ್ಷಗಳಲ್ಲೇ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇನ್ನು ಪ್ರತಿಪಕ್ಷ ಬಿಜೆಪಿಯಂತೂ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದು, ಈ ನಿರ್ಣಯದ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆಪಾದನೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಈ ನಿರ್ಧಾರದ ವಿರುದ್ಧ ತಮ್ಮ ಪಕ್ಷ ಪ್ರತಿಭಟನೆ ನಡೆಸಲಿದೆ. ಜೂ.5ರಂದು ಪಕ್ಷದ ಎಲ್ಲಾ ಶಾಸಕರು ಹಾಗೂ ಸಂಸದರ ಸಭೆ ಕರೆಯಲಾಗಿದ್ದು, ಅಲ್ಲಿ ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸೋಮವಾರ ನಡೆದ ಸಂಪುಟ ಸಭೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ಈ ನಿರ್ಣಯ ಖಂಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಮಂಗಳವಾರ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿರುವ ಅವರು, ಕಾನೂನು ಇಲಾಖೆ ಆಕ್ಷೇಪಿಸಿದ್ದರೂ ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡುವ ಸರ್ಕಾರದ ನಿರ್ಧಾರ ಕರಾಳ ನಿರ್ಣಯ. ಇದು ರಾಜ್ಯದ ಹಿತಕ್ಕೆ ಮಾರಕವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್‌ ಕಂಪನಿಗೆ ಗಣಿಗಾರಿಕೆ ನಡೆಸಲು ಭೂಮಿ ಮಾರಾಟ ಮಾಡದಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರಿಗೆ ಎಷ್ಟರ ಮಟ್ಟಿಗೆ ಮನವರಿಕೆ ಆಗಿದೆ ಎಂಬುದು ಗೊತ್ತಿಲ್ಲ. ಮೈತ್ರಿ ಸರ್ಕಾರಕ್ಕೆ ಕೆಟ್ಟಹೆಸರು ಬರಬಾರದು, ಸರಿಯಾದ ದಾರಿಯಲ್ಲಿ ಹೋಗಬೇಕು ಎಂಬ ಕಾರಣದಿಂದ ಪತ್ರ ಬರೆದಿದ್ದೇನೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಕಂಪನಿಗೆ ಭೂಮಿ ನೀಡುವ ಅಗತ್ಯವೇನಿತ್ತು? ಸಾವಿರಾರು ಕೋಟಿ ರು.ಗಳನ್ನು ಸರ್ಕಾರಕ್ಕೆ ಜಿಂದಾಲ್‌ ಬಾಕಿ ಇರಿಸಿಕೊಂಡಿದೆ. ಮೈಸೂರು ಮಿನರಲ್ಸ್‌ಗೆ ಜಿಂದಾಲ್‌ ಕಂಪನಿ ಮೋಸ ಮಾಡಿದೆ. ಹೀಗಿರುವಾಗಿ ಕೋಟಿಗಟ್ಟಲೆ ಬೆಲೆಬಾಳುವ ಭೂಮಿಯನ್ನು ಲಕ್ಷ ರು.ಗಳಿಗೆ ಮಾರಾಟ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ವಿಶ್ವನಾಥ್‌ ಕೂಡ ವಿರೋಧ:

ಎಚ್‌.ಕೆ. ಪಾಟೀಲ್‌ ಅವರು ಹಿರಿಯ ಮುಖಂಡರು. ಅವರಿಗೆ ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ. ಅಂತಹವರು ಪತ್ರ ಬರೆದಿದ್ದಾರೆಂದರೆ ಅದರಲ್ಲಿ ವಾಸ್ತವಾಂಶ ಇರಬಹುದು ಎಂದು ಆಡಳಿತಾರೂಢ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್‌.ವಿಶ್ವನಾಥ್‌ ಪರೋಕ್ಷವಾಗಿ ಬೆಂಬಲಿಸಿದ್ದಾರೆ.

ಇಸ್ಫೋಸಿಸ್‌ಗೂ ಕೊಟ್ಟಿದ್ದೆವು - ಡಿಕೆಶಿ:

ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವು ನಾಯಕರು ಜಿಂದಾಲ್‌ ಸ್ಟೀಲ್‌ಗೆ 3,667 ಎಕರೆ ಜಮೀನು ಶುದ್ಧ ಕ್ರಯಪತ್ರ ಮಾಡಿಕೊಡುವ ಸರ್ಕಾರದ ನಿರ್ಧಾರವನ್ನು ಟೀಕಿಸುತ್ತಿದ್ದರೆ ಸಚಿವ ಡಿ.ಕೆ. ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌, ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿವಿಚಾರದಲ್ಲಿ ಇಂತಹ ನಿರ್ಣಯಗಳು ಅಗತ್ಯವಾಗುತ್ತವೆ. ಇಸ್ಫೋಸಿಸ್‌ಗೆ ಮೈಸೂರಿನಲ್ಲಿ ಜಮೀನು ನೀಡಿದಾಗಲೂ ಆಕೇಪ ವ್ಯಕ್ತವಾಗಿತ್ತು. ಆದರೆ ಇದೀಗ ಆ ಸಂಸ್ಥೆಯಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗಿದೆ. ನಾನು ಬಳ್ಳಾರಿ ಉಸ್ತುವಾರಿಯಾಗಿ ಈ ಬಗ್ಗೆ ಮಾತಾಡಲೇಬೇಕು. ಹೀಗಾಗಿ ಮಾತನಾಡಿದ್ದೇನೆ ಎಂದು ಪ್ರತಿಪಾದಿಸಿದರು.

ಶೆಟ್ಟರ್‌, ಜೋಶಿ, ರವಿ ವಿರೋಧ:

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಇದರಲ್ಲಿ ಮೇಲ್ನೋಟಕ್ಕೆ ಅವ್ಯವಹಾರವಾಗಿರುವುದು ಖಚಿತವಾಗಿದ್ದು, ಜಿಂದಾಲ್‌ ಕಂಪನಿಗೆ ಹೆಚ್ಚಿನ ರೀತಿಯಲ್ಲಿ ಲಾಭ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಭ್ರಷ್ಟಾಚಾರದ ಸುಳಿವು ಸ್ಪಷ್ಟವಾಗಿ ಕಾಣುತ್ತಿದೆ. ಜಿಂದಾಲ್‌ ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದ ಏನು ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ನೂತನ ಸಂಸದ ಪ್ರಹ್ಲಾದ್‌ ಜೋಶಿ ಮಾತನಾಡಿ, ಜಿಂದಾ​ಲ್‌ಗೆ ಭೂಮಿ ನೀಡು​ವುದು ಹಾಗೂ ತರಾ​ತು​ರಿ​ಯಲ್ಲಿ ತುಂಡು ಗುತ್ತಿಗೆ ನೀಡುವ ಕುರಿತು ಕೂಡಲೇ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವ​ರಿಗೆ ಪತ್ರ ಬರೆದು ಅವ​ರಿಂದ ಉತ್ತರ ಬಯ​ಸು​ತ್ತೇನೆ ಎಂದು ತಿಳಿಸಿ​ದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪತನದ ಭೀತಿಯಲ್ಲಿರುವ ರಾಜ್ಯದ ಮೈತ್ರಿ ಸರ್ಕಾರ ಜೆಎಸ್‌ಡಬ್ಲ್ಯು ಕಂಪನಿಗೆ 3,700 ಎಕರೆ ಜಾಗ ನೀಡುವ ತೀರ್ಮಾನಕ್ಕೆ ಬಂದಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಕಡಿಮೆ ದರದಲ್ಲಿ ಜಮೀನು ಕೊಡುತ್ತಿರುವುದು ಕಾಂಗ್ರೆಸ್‌-ಜೆಡಿಎಸ್‌ ತಮ್ಮ ಖಾಸಗಿ ಜೋಳಿಗೆ ತುಂಬಿಸಿಕೊಳ್ಳಲು. ತಕ್ಷಣವೇ ಈ ತೀರ್ಮಾನ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹಗರಣ ನಡೆದಿದೆ - ಅಶೋಕ್‌:

ನಗರದಲ್ಲಿ ಮಾತನಾಡಿದ ಮತ್ತೋರ್ವ ಬಿಜೆಪಿ ನಾಯಕ ಆರ್‌.ಅಶೋಕ್‌, ಚುನಾವಣಾ ನೀತಿ ಸಂಹಿತೆ ಅವಧಿ ಮುಗಿಯುತ್ತಿದ್ದಂತೆ ತರಾತುರಿಯಲ್ಲಿ ಜಿಂದಾಲ್‌ ಕಂಪನಿಗೆ ಗಣಿಗಾರಿಕೆ ನಡೆಸಲು ಭೂಮಿ ಮಾರಾಟ ಮಾಡಲು ಮುಂದಾಗಿರುವುದನ್ನು ನೋಡಿದರೆ ಹಗರಣ ನಡೆದಿದೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಲೀಸ್‌ ಅವಧಿ ಮುಗಿದ ನಂತರ ಕಂಪನಿಗೆ ವಿಕ್ರಯ ಮಾಡಿರಬಹುದು. ಹಾಗೆಂದು ಬಿಜೆಪಿ ಆಡಳಿತಾವಧಿಯ ಎಲ್ಲ ನಿರ್ಧಾರಗಳನ್ನು ಜಾರಿಗೆ ತರಲಾಗಿದೆಯೇ? ಎಷ್ಟೋ ನಿರ್ಧಾರಗಳನ್ನು ಸರ್ಕಾರ ತಡೆ ಹಿಡಿದಿಲ್ಲವೇ? ಕೇವಲ ತಮಗಿಷ್ಟಬಂದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ನಿರ್ಧರಿಸಬಾರದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.