ಹಾಸನ, [ನ.07]:  ಶತಾಯಗತಾಯವಾಗಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಕಾಂಗ್ರೆಸ್ ಶಾಸಕರನ್ನ ಸೆಳೆಯಲು ಹಲವು ಆಮಿಷವೊಡ್ಡುತ್ತಿರುವುದು ಬಯಲಾಗಿದೆ. 

ಆಪರೇಷನ್ ಕಮಲಕ್ಕೆ ಬಿಜೆಪಿ ನಾಯಕರು ನಿರಂತರ ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.‌ಡಿ. ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ ಶೃಂಗೇರಿ ಶಾಸಕ ಕೂಡ ಈ ರಹಸ್ಯ ಬಯಲು ಮಾಡಿದ್ದಾರೆ. 

 ಇಂದು [ಬುಧವಾರ] ಹಾಸನಾಂಬೆ ದೇವಿಯ ದರ್ಶನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಗೌಡ, ಬಿಜೆಪಿಗೆ ಸೆಳೆಯಲು ನನ್ನ ಸಂಬಂಧಿಕರ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದರು. 

ಸಂಬಂಧಿಕರು ಹಾಗೂ ನಾರ್ವೆ ಸೋಮಶೇಖರ್‌ ಮೂಲಕ ನನ್ನ ಸೆಳೆಯಲು ಯತ್ನಿಸಿದರು. ಇದಕ್ಕೆ ಬಿಜೆಪಿ ರಾಜ್ಯ ಹಿರಿಯ ನಾಯಕರು ಕುಮ್ಮಕ್ಕು ನೀಡಿದ್ದು, ಕಾಂಗ್ರೆಸ್‌ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎಂದು ತಿಳಿಸಿದರು. 

50 ಕೋಟಿ ರೂಪಾಯಿ, ಸಚಿವ ಸ್ಥಾನ ಅಥವಾ 100 ಕೋಟಿ ರೂಪಾಯಿ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ರಾಜೇಗೌಡ ಗಂಭೀರ ಆರೋಪ ಮಾಡಿದರು.