ನವದೆಹಲಿ, (ಜೂನ್.11): 17ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ಸಂಸದ ಡಾ.ವೀರೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.

ಮಧ್ಯ ಪ್ರದೇಶದ ಟಿಕಾಮ್ ಗಢ್ ನಿಂದ 7 ಬಾರಿ ಸಂಸದರಾಗಿ ಆಯ್ಕೆಯಾಗಿರುವ ವೀರೇಂದ್ರ ಕುಮಾರ್ ಅವರನ್ನು 17ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. 

ಈ ಹಿಂದಿನ ಎನ್ ಡಿಎ ಸರ್ಕಾರದಲ್ಲಿ ವೀರೇಂದ್ರ ಕುಮಾರ್ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಅಲ್ಪ ಸಂಖ್ಯಾತರ ಖಾತೆಯ ರಾಜ್ಯ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಮನೇಕಾ ಗಾಂಧಿಯವರನ್ನು ಸಂಪುಟದಿಂದ ಹೊರಗಿಟ್ಟಾಗ, ಈ ಬಾರಿಯ ಸ್ಪೀಕರ್​ ಆಗಿ ಅವರನ್ನು ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈ ಊಹಾಪೋಹಕ್ಕೆ ಉತ್ತರ ಸಿಕ್ಕಿದ್ದು, ಸ್ಪೀಕರ್​ ಸ್ಥಾನಕ್ಕೆ ವೀರೇಂದ್ರ ಕುಮಾರ್​ ಆಯ್ಕೆಯಾಗಿದ್ದಾರೆ.