ಅನೇಕ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ

BJP MLAs Connection With Congress Says Jarkiholi
Highlights

ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಬಳಿಕ ಅನೇಕ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

ಬೆಂಗಳೂರು :  ಬಿಜೆಪಿಯವರೇ ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಶಾಸಕರು ಯಾರೂ ಬಿಜೆಪಿ ಸಂಪರ್ಕದಲ್ಲಿಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ನಗರದ ಸುವರ್ಣವಿಧಾನ ಸೌಧದಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದರು. ಇದೇ ಸಂದರ್ಭದಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂದು ಹೇಳಿದ್ದ ಸಚಿವ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು. 

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಣೆಗೆ ಶಾಂತಿಧಾಮಕ್ಕೆ ತೆರಳಿದರೆ ಹೇಗೆ ವ್ಯಕ್ತಿ ಪೂಜೆಯಾಗುತ್ತದೆ. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂಬ ಹೇಳಿಕೆ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ವಿಚಾರ. ನನ್ನಷ್ಟು ನಿಷ್ಠಾವಂತ ಕಾರ್ಯಕರ್ತ ಕಾಂಗ್ರೆಸ್ ನಲ್ಲಿ ಯಾರೂ ಇಲ್ಲ ಎಂದರು. 

ಸಿದ್ದರಾಮಯ್ಯ ಅವರೇ ನಮ್ಮ ನಾಯಕ. ವೈಯಕ್ತಿಕವಾಗಿ ನನಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರು ಬಹಳಷ್ಟು ಉಪಕಾರ ಮಾಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಹೀಗಾಗಿ ನಾನು ಸೇರಿದಂತೆ ಕೆಲ ಶಾಸಕರು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಣೆಗೆ ಶಾಂತಿಧಾಮಕ್ಕೆ ಭೇಟಿ ನೀಡಿದ್ದೆವು ಎಂದರು.  ಕುಮಾರಸ್ವಾಮಿ ಅವರು ನೂತನ ಬಜೆಟ್ ಮಂಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪ ಡಿಸಿಲ್ಲ. ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೆ  ಸಿಗಬೇಕು. ಆದರೆ, ಅಂತಿಮವಾಗಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. ಉತ್ತರ ಕರ್ನಾಟಕದಿಂದ ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ ಸೇರಿದಂತೆ ಯಾರೂ ಬೇಕಾದವರು ಕೆಪಿಸಿಸಿ ಅಧ್ಯಕ್ಷರಾಗಲಿ ಎಂದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನದು ಅಖಂಡ ಕರ್ನಾಟಕ ಇರಬೇಕು ಎಂಬ ಉದ್ದೇಶವಿದೆ ಎಂದರು. 

loader