ವಿಧಾನಸಭೆ[ಜು.19]: ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನಿರ್ದಿಷ್ಟಕಾಲಮತಿಯೊಳಗೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬೇಕೆಂದು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್‌ ಪ್ರತಿಬಂಧಿಸಿದಾಗ ನಿಮಗೆ ಸುಪ್ರಿಂ ಕೋರ್ಟ್‌ ಶ್ರೇಷ್ಠವಾಗಿ ಕಾಣಿಸಿತ್ತು. ಆದರೆ, ಈಗ ನಿಮ್ಮ ಹಿತಾಸಕ್ತಿಗೆ ವಿರುದ್ಧವಾದ ತೀರ್ಪು ನೀಡಿದೆ ಎಂಬ ಕಾರಣಕ್ಕೆ ಕೋರ್ಟ್‌ ಶ್ರೇಷ್ಠವಾಗಿ ಕಾಣುತ್ತಿಲ್ಲವೇ?

ವಿಶ್ವಾಸ ಮತಯಾಚನೆ ನಿರ್ಣಯ ಪ್ರಕ್ರಿಯೆಯನ್ನು ಗುರುವಾರವೇ ಪೂರ್ಣಗೊಳಿಸುವಂತೆ ರಾಜ್ಯಪಾಲರು ನೀಡಿದ ಸಂದೇಶವನ್ನು ಮೈತ್ರಿ ಕೂಟದ ಶಾಸಕರು ಸದನದಲ್ಲಿ ಟೀಕಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕ ಮಾಧುಸ್ವಾಮಿ ಮಾತಿನ ಚಾಟಿ ಬೀಸಿದ್ದು ಹೀಗೆ. ಈ ವೇಳೆ ವಿಶ್ವಾಸಮತ ವಿಳಂಬ ಮಾಡುತ್ತಿರುವ ಕುರಿತು ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ನೀಡಿದ ದೂರನ್ನೂ ಮಾಧುಸ್ವಾಮಿ ಬಲವಾಗಿ ಸಮರ್ಥಿಸಿಕೊಂಡರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈತ್ರಿ ಸರ್ಕಾರ ರಚನೆಗೂ ಮುನ್ನ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿದ್ದರು. ರಾಜ್ಯಪಾಲರ ಈ ನಿರ್ಧಾರವನ್ನು ನೀವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್‌ನಿಂದ ಆದೇಶ ಪಡೆದಿರಿ. ಆಗ ಸುಪ್ರೀಂಕೋರ್ಟ್‌ ನಿಮಗೆ ಶ್ರೇಷ್ಠವಾಗಿ ಕಾಣಿಸಿತು. ಈಗ ಮೈತ್ರಿ ಸರ್ಕಾರದ ಬಹುಮತ ಕಳೆದು ಕೊಂಡಿರುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಆದೇಶ ಮತ್ತು ವಿಶ್ವಾಸ ಮತಯಾಚನೆ ಕುರಿತು ರಾಜ್ಯಪಾಲರ ಸಂದೇಶ ಶ್ರೇಷ್ಠವಾಗಿ ಕಾಣುತ್ತಿಲ್ಲವೇ? ಎಂದು ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು.

ಈಗ ಬಿಕ್ಕಟ್ಟು ಜಾಸ್ತಿ:

ಬಿಜೆಪಿ ಅಧಿಕಾರದಲ್ಲಿದ್ದಾಗ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗಿತ್ತು ಎಂದು ವಾದಿಸಿದ ಮಿತ್ರಪಕ್ಷದ ಸದಸ್ಯರಿಗೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗಿಲ್ಲವೇ? ಈಗಿನ ಪರಿಸ್ಥಿತಿ ಗಮನಿಸಿದರೆ ಆಗಿನದದ್ದಕ್ಕಿಂತಲೂ ಈಗ ಸಂವಿಧಾನ ಬಿಕ್ಕಟ್ಟು ಜಾಸ್ತಿಯೇ ಇದೆ. ಯಡಿಯೂರಪ್ಪ ಅಧಿಕಾರ ಕಳೆದುಕೊಂಡು ಹೋಗಬೇಕಾದರೆ ಸಂತಸದಲ್ಲಿದ್ದ ಮಿತ್ರಪಕ್ಷದವರಿಗೆ ಈಗ ಅಧಿಕಾರ ಬಿಡಲು ದುಃಖವಾಗುತ್ತಿದೆಯೇ? ಎಂದೂ ಬಿಜೆಪಿ ಶಾಸಕ ಕಾಲೆಳೆದರು.

ವಿಶ್ವಾಸಮತ ಯಾಚನೆ ಕೇಳುವ ಬದಲು ವಿನಾಕಾರಣ ಸಮಯ ವ್ಯರ್ಥ ಮಾಡಲಾಗುತ್ತಿದೆ. ವಿಶ್ವಾಸಮತಯಾಚನೆ ಮಾಡದೆ ಬೇರೆ ವಿಷಯದ ಬಗ್ಗೆ ಚರ್ಚೆ ನಡೆಸಲು ಮೊದಲೇ ಎಲ್ಲಾ ತಯಾರಿ ನಡೆಸಿಕೊಂಡು ಬರಲಾಗಿದೆ. ನಾವು ಕೇವಲ ವಿಶ್ವಾಸಮತಯಾಚನೆ ವಿಚಾರ ಎಂದಷ್ಟೇ ಭಾವಿಸಿದ್ದೆವು. ಆದರೆ, ಚರ್ಚೆ ಮಾಡಬೇಕಾದ ವಿಷಯ ಬಿಟ್ಟು ಬೇರೆ ವಿಚಾರ ಚರ್ಚೆ ನಡೆಸಲಾಗುತ್ತಿದ್ದು, ಇದು ಸರಿಯಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದರು.