ನವದೆಹಲಿ[ಜೂ.06]: 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವ ಬೆನ್ನಲ್ಲೇ ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

370ನೇ ವಿಧಿ ರದ್ದತಿ ಬೆನ್ನಲ್ಲೇ ಕೇಂದ್ರ ಸರ್ಕಾರ 2011ರ ಜನಗಣತಿ ಆಧರಿಸಿ ಜಮ್ಮು- ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡಣೆ ಮಾಡಲು ಉದ್ದೇಶಿಸಿದೆ. ಹಾಗಾದಲ್ಲಿ ಕಾಶ್ಮೀರದಲ್ಲಿನ ಕ್ಷೇತ್ರಗಳ ಸಂಖ್ಯೆ ಕುಗ್ಗಿಸಿ, ಜಮ್ಮು ಭಾಗದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಜಮ್ಮು-ಕಾಶ್ಮೀರದ ರಾಜಕೀಯ ಚಿತ್ರಣವೇ ಬದಲಾಗುವ ನಿರೀಕ್ಷೆ ಇದೆ. ಪೂರಕವಾದ ಪರಿಸ್ಥಿತಿ ಉದ್ಭವವಾದರೆ ಕಾಶ್ಮೀರ ಮೊದಲ ಬಾರಿಗೆ ಕಾಶ್ಮೀರೇತರ ಹಾಗೂ ಮುಸಲ್ಮಾನೇತರ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಕಾಣುವ ಸಾಧ್ಯತೆ ಇದೆ.

ಆಪರೇಷನ್ ಕಾಶ್ಮೀರ, ಆರ್ಟಿಕಲ್ 370 ರದ್ದು: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅವಿಭಜಿತ ಜಮ್ಮು-ಕಾಶ್ಮೀರದಲ್ಲಿ ಹಾಲಿ ಒಟ್ಟು 111 ಕ್ಷೇತ್ರಗಳು ಇವೆ. ಆದರೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ವಿಧಾನಸಭೆ ಕ್ಷೇತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ಜಮ್ಮು-ಕಾಶ್ಮೀರದ ವಿಧಾನಸಭೆಯ ಹಾಲಿ ಬಲ 87ರಷ್ಟಿದೆ. ಈ ಪೈಕಿ ಬಹುಮತಕ್ಕೆ 44 ಸ್ಥಾನಗಳು ಬೇಕಾಗಿದೆಯಾದರೂ, ಕಾಶ್ಮೀರ ಪ್ರಾಂತ್ಯವೊಂದರಲ್ಲೇ 46 ಸ್ಥಾನಗಳು ಇವೆ. ಹೀಗಾಗಿ ಪ್ರತಿ ಬಾರಿ ಕಾಶ್ಮೀರಿಗಳು, ಅದರಲ್ಲೂ ಮುಸ್ಲಿಮರೇ ಆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ.