ಜಮ್ಮು: ಜಮ್ಮು- ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿ ಕಡಿದುಕೊಂಡಿರುವ ಬಿಜೆಪಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿದೆ. ಕಾಶ್ಮೀರದಲ್ಲಿ ಹೊಸ ಸರ್ಕಾರ ರಚನೆಯ ಬಗ್ಗೆ ಸುಳಿವು ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕವಿಂದರ್‌ ಗುಪ್ತಾ, ರಾಜ್ಯಪಾಲರ ಆಳ್ವಿಕೆ ಶಾಶ್ವತ ಪರಿಹಾರ ಅಲ್ಲ. ಸರ್ಕಾರ ಖಂಡಿತವಾಗಿಯೂ ರಚನೆ ಆಗಬೇಕಿದೆ. ಮಹತ್ವದ ರಾಜಕೀಯ ಬೆಳವಣಿಗೆ ಆರಂಭವಾದ ವೇಳೆ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕತ್ವ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಅವರು ಶ್ರೀನಗರಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದು, ಸಜ್ಜದ್‌ ಲೋನ್‌ ಹಾಗೂ ಪಿಡಿಪಿಯ ಬಂಡಾಯ ಶಾಸಕರನ್ನು ಭೇಟಿ ಆಗಿದ್ದಾರೆ. ಪಕ್ಷದ ಉನ್ನತ ನಾಯಕರಿಗೆ ಸರ್ಕಾರ ರಚಿಸಲು ರಾಮ್‌ ಮಾಧವ್‌ ಹಸಿರು ನಿಶಾನೆ ತೋರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಆ.15ರ ಬಳಿಕ ಪೀಪಲ್ಸ್‌ ಕಾನ್ಫರೆನ್ಸ್‌ನ ಸಜ್ಜದ್‌ ಲೋನ್‌, ದೆಹಲಿಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಬಿಜೆಪಿಯ ಉನ್ನತ ನಾಯಕರ ಜೊತೆಗಿನ ಮಾತುಕತೆಯ ಬಳಿಕ ಲೋನ್‌ ಬಿಜೆಪಿಯ ಜೊತೆ ಸೇರಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎನ್ನಲಾಗಿದೆ.