ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಸರ್ಕಾರ ಪಠ್ಯಕ್ರಮ ಬದಲಾಯಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಶಾಸಕರ ನಿಯೋಗ ಬುಧವಾರ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದೂರು ನೀಡಿದೆ.

ಬೆಂಗಳೂರು (ಜ.04): ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಸರ್ಕಾರ ಪಠ್ಯಕ್ರಮ ಬದಲಾಯಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಬಿಜೆಪಿ ಶಾಸಕರ ನಿಯೋಗ ಬುಧವಾರ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದೂರು ನೀಡಿದೆ.

ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಅರುಣ್ ಶಹಾಪುರ ಹಾಗೂ ಅನುರಾಧ ತಾರಾ ಅವರನ್ನೊಳಗೊಂಡ ನಿಯೋಗ ರಾಜ್ಯಪಾಲ ವಾಲಾ ಅವರನ್ನು ಭೇಟಿ ಮಾಡಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪರಿಷ್ಕರಣೆಗೆ ಒಳಪಡದೇ ರಾಜ್ಯ ಸರ್ಕಾರ ಪಠ್ಯಕ್ರಮ ಬದಲಾವಣೆ ಮಾಡಲು ಅವಕಾಶ ಇಲ್ಲ. ಹೀಗಾಗಿ ಸರ್ಕಾರದ ಅವಸರದ ಕ್ರಮವನ್ನು ತಡೆಯುವಂತೆ ಮನವಿ ಮಾಡಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ರಾಜ್ಯ ಸರ್ಕಾರ ರಾಜ್ಯದ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳ ಪಠ್ಯ ಪುಸ್ತಕ ಬದಲಾವಣೆ ಮಾಡಲು ಮುಂದಾಗಿದೆ. ಆದರೆ ಬದಲಾವಣೆ ವೇಳೆ ಕಾನೂನು ಅನುಸರಿಸಬೇಕು. ಯಾವುದೇ ಪಠ್ಯ ಪುಸ್ತಕ ಬದಲಾವಣೆ ಮಾಡಬೇಕಾದರೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ಶಿಫಾರಸು ಪಡೆಯಬೇಕು. ಆದರೆ ಈವರೆಗೆ ಸಮಿತಿ ವರದಿಯನ್ನೇ ಕೊಟ್ಟಿಲ್ಲ. ಆದರೂ ಸರ್ಕಾರ ಈ ವರ್ಷವೇ ಪುಸ್ತಕ ಮುದ್ರಣಕ್ಕೆ ಮುಂದಾಗಿದೆ. ಎನ್‌ಸಿಆರ್‌ಟಿ ಪ್ರಕಾರ ಪರಿಷ್ಕರಣೆ ಆಗಬೇಕು. ಹೀಗಾಗಿ ಏಕಾಏಕಿ ಇದನ್ನ ಜಾರಿಗೊಳಿಸುತ್ತಿರುವುದು ಸರಿಯಲ್ಲ. ರಾಜ್ಯಪಾಲರಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.