ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡರು ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಪಕ್ಷದ ಪ್ರಮುಖ ಮುಖಂಡರ ಸಭೆಯಲ್ಲಿ ವ್ಯಕ್ತವಾಗಿದೆ.

ಸೋಮವಾರ ಇಡೀ ದಿನ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಮುಖಂಡರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಸದಾನಂದಗೌಡರೂ ಸೇರಿದಂತೆ ಆ ಕ್ಷೇತ್ರದ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರು ಮತದಾರರ ಮನ ಗೆಲ್ಲುವ ಮೂಲಕ ಪಕ್ಷದ ಗೆಲುವಿಗೆ ಬೇಕಾದ ಕಾರ್ಯತಂತ್ರಗಳನ್ನು ಅನುಸರಿಸಬೇಕು ಎಂಬ ಸೂಚನೆಯನ್ನೂ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನೀಡಿದ್ದಾರೆ ಎನ್ನಲಾಗಿದೆ.

ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ನಾಯಕರು ಪ್ರತಿ ಲೋಕಸಭಾ ಕ್ಷೇತ್ರದ ಪ್ರಮುಖ ಮುಖಂಡರ ಸಭೆ ಆರಂಭಿಸಿದ್ದು, ಅಲ್ಲಿನ ರಾಜಕೀಯ ಸ್ಥಿತಿಗತಿ ಹಾಗೂ ಯಾರನ್ನು ಅಭ್ಯರ್ಥಿಯನ್ನಾಗಿಸಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದ್ದಾರೆ. ಭಾನುವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಾಗಿತ್ತು. ಸೋಮವಾರ ಬೆಂಗಳೂರಿನ ಉತ್ತರ, ದಕ್ಷಿಣ ಮತ್ತು ಸೆಂಟ್ರಲ್‌ ಕ್ಷೇತ್ರಗಳ ಮುಖಂಡರ ಸಭೆ ನಡೆಯಿತು.

ಒಕ್ಕಲಿಗರು ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಗೆ ಈ ಮೊದಲಿನ ಹಿಡಿತ ಇಲ್ಲ. ಕಳೆದ ಬಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ, ಈ ಬಾರಿ ಕೇವಲ ಮಲ್ಲೇಶ್ವರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಹೀಗಿರುವಾಗ ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿಯಾಗಿ ಅಭ್ಯರ್ಥಿ ಕಣಕ್ಕಿಳಿಸಿದಲ್ಲಿ ಪಕ್ಷಕ್ಕೆ ಕಷ್ಟವಾಗಬಹುದು ಎಂಬ ಆತಂಕವಿದೆ. ಹೀಗಾಗಿ, ಇನ್ನೂ ನಾಲ್ಕೈದು ತಿಂಗಳು ಸಮಯ ಇರುವುದರಿಂದ ಈಗಿನಿಂದಲೇ ಕಾರ್ಯೋನುಖರಾಗುವಂತೆ ಆ ಕ್ಷೇತ್ರದ ವ್ಯಾಪ್ತಿಯ ಮುಖಂಡರಿಗೆ ಸೂಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.