ಇದುವರೆಗೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಜೆಪಿ ಮುಖಂಡರಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅನೇಕ ಬಿಜೆಪಿ ನಾಯಕರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. 

ಹುಬ್ಬಳ್ಳಿ : ನಮ್ಮವರು ಅವರ ಜತೆಗಲ್ಲ ಬಿಜೆಪಿಯವರೇ ಕಾಂಗ್ರೆಸ್‌ ಜತೆಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಹೇಗಾದರೂ ಮಾಡಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಇಂಥ ಪ್ರಯತ್ನಕ್ಕೆ ಕೈ ಹಾಕಿ ಮೂರು ದಿನ ಮುಖ್ಯಮಂತ್ರಿಯಾಗಿದ್ದರು. ಮತ್ತೆ ಅಂತಹ ಯಾವ ಪ್ರಯತ್ನಗಳೂ ಫಲಕಾರಿ ಆಗುವುದಿಲ್ಲ. ಬಿಜೆಪಿ ಶಾಸಕರೇ ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇನ್ನು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರಿಗೆ ಈ ದೇಶದ ಕಾನೂನಾಗಲಿ, ಸಂವಿಧಾನವಾಗಲಿ ಗೊತ್ತಿಲ್ಲ. ಅಂಥವರ ಮಾತಿಗೆ ನಾನು ಉತ್ತರಿಸುವ ಗೋಜಿಗೂ ಹೋಗುವುದಿಲ್ಲ ಎಂದು ಇದೇ ವೇಳೆ ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಂಬಿಕೆಯಿಲ್ಲ ಎನ್ನುವ ಚಾಮರಾಜನಗರದಲ್ಲಿ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದರು.

ಹುಳಿ ಹಿಂಡುತ್ತಿರುವ ಬಿಜೆಪಿ: ಬಿಜೆಪಿಗರು ಬರೀ ಜಾತಿ ರಾಜಕಾರಣ ಮಾಡುತ್ತ ಸಮಾಜದಲ್ಲಿ ಜಾತಿ ಹೆಸರಿನಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಅವರ ಸಾಧನೆ ಶೂನ್ಯ. ನಾನೂ ಹಿಂದು. ನಾವು ಯಾರೂ ಇಂತಹದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದವರಲ್ಲ. ನಾವೆಲ್ಲ ಮನುಷ್ಯರು. ಮೊದಲು ಮನುಷ್ಯ ಮನುಷ್ಯನನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದರು.

ಜೆಡಿಎಸ್‌ ಜತೆ ಫ್ರೆಂಡ್ಲಿ ಫೈಟ್‌: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಇದ್ದು, ಜೆಡಿಎಸ್‌ ನಡುವೆ ಫ್ರೆಂಡ್ಲಿ ಫೈಟ್‌ ನಡೆಯಲಿದೆ. ಕಾಂಗ್ರೆಸ್‌ಗೆ ಬಿಜೆಪಿ ಪ್ರಮುಖ ರಾಜಕೀಯ ವೈರಿಯಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತರೂ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.