ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೊಂಡಿದ್ದ ಮೂರು ದಿನಗಳ ರಾಜ್ಯ ಪ್ರವಾಸ ಸಿಕ್ಕಾಪಟ್ಟೆ ವರ್ಕೌಟ್ ಆಗಿದೆ. ಶಾ ಸೂಚನೆಗೆ ತಡಬಡಾಯಿಸಿ ಎದ್ದು ಕುಳಿತಿರುವ ರಾಜ್ಯ ಬಿಜೆಪಿ ನಾಯಕರು ಈಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ಶುಕ್ರವಾರದಿಂದ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಶುರುವಾಗಲಿದೆ.
ಬೆಂಗಳೂರು (ಆ.16): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೊಂಡಿದ್ದ ಮೂರು ದಿನಗಳ ರಾಜ್ಯ ಪ್ರವಾಸ ಸಿಕ್ಕಾಪಟ್ಟೆ ವರ್ಕೌಟ್ ಆಗಿದೆ. ಶಾ ಸೂಚನೆಗೆ ತಡಬಡಾಯಿಸಿ ಎದ್ದು ಕುಳಿತಿರುವ ರಾಜ್ಯ ಬಿಜೆಪಿ ನಾಯಕರು ಈಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ಶುಕ್ರವಾರದಿಂದ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಶುರುವಾಗಲಿದೆ.
ಅಮಿತ್ ಶಾ ಟ್ರೀಟ್ಮೆಂಟ್ ಗೆ ಚುರುಕಾದ ಬಿಜೆಪಿ
ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿಗೆ ಅಮಿತ್ ಶಾ ಕೊಟ್ಟ ಟಾನಿಕ್ ಈಗ ಕೆಲಸ ಮಾಡಲಾರಂಭಿಸಿದೆ. ಸರ್ಕಾರದ ವಿರುದ್ಧ ಹೋರಾಟದ ಕೆಲಸ ಆರಂಭಿಸಲು ಅಮಿತ್ ಶಾ ಕೊಟ್ಟಿದ್ದ ನಿರ್ದೇಶನದನ್ವಯ ರಾಜ್ಯ ಬಿಜೆಪಿ ಚುರುಕಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಸೇರಿದ್ದ ಬೆಂಗಳೂರು ಭಾಗದ ಶಾಸಕರು ಮತ್ತು ಬಿಬಿಎಂಪಿ ಸದಸ್ಯರುಗಳು ಹೋರಾಟದ ಪೂರ್ವಸಿದ್ಧತಾ ಸಭೆ ನಡೆಸಿದ್ದಾರೆ. ಮುಂದಿನ ಶುಕ್ರವಾರವೇ ಬೆಂಗಳೂರಿನಲ್ಲಿ ಐಟಿ ದಾಳಿಗೊಳಗಾದ ಸಚಿವರಾದ ಡಿ.ಕೆ. ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾ ಸಭೆ ಮತ್ತು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ನಿಗದಿಪಡಿಸಿದ್ದು, ಒಂದು ವಾರಗಳ ಕಾಲ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ.
ಇದೀಗ ಬೆಂಗಳೂರಿನಲ್ಲಿ ಸುರಿದಿರುವ ಮಳೆಯಿಂದಾಗಿರುವ ಹಾನಿ ಪ್ರಕರಣವನ್ನೂ ಬಳಸಿಕೊಳ್ಳಲು ಹೊರಟಿರುವ ರಾಜ್ಯ ಬಿಜೆಪಿ ಮುಖಂಡರು ದೀಢೀರ್ ಆಗಿ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿಯನ್ನೂ ನೀಡಿದ್ದಾರೆ. ಅಮಿತ್ ಶಾ ಸೂಚನೆ ನೀಡಿದ ಬಳಿಕ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಸಿಕ್ಕಿರುವ ಹೊಸ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿಯೇ ಇಂದು ಯಡಿಯೂರಪ್ಪ ಮತ್ತು ಅಶೋಕ್ ಯಡಿಯೂರು ವಾರ್ಡ್ನಲ್ಲಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಜೊತೆ ರಾಜ್ಯ ಯುವ ಮೋರ್ಛಾ ಕೂಡಾ ಅಮಿತ್ ಶಾ ತೆಗೆದುಕೊಂಡ ಕ್ಲಾಸ್ನ ಪರಿಣಾಮವಾಗಿ ಕೆಲಸ ಆರಂಭಿಸಿದೆ. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿನ್ನೆಲೆಯಲ್ಲಿ ಪಿಎಫ್ಐ ಮತ್ತು ಕೆಎಫ್ಡಿ ಸಂಘಟನೆಗಳ ನಿಷೇಧ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ರಾಜೀನಾಮೆಗೆ ಆಗ್ರಹಿಸಿ ನಾಳೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆಯೋಜಿಸಿದೆ. ಒಟ್ಟಾರೆ, ಮೂರು ದಿನಗಳ ರಾಷ್ಟ್ರೀಯ ಅಧ್ಯಕ್ಷರಿಂದ ಪಾಠ ಹೇಳಿಸಿಕೊಂಡ ರಾಜ್ಯ ಬಿಜೆಪಿಗರು ಮುಂದಿನ ಅಕ್ಟೋಬರ್ ನಲ್ಲಿ ಮತ್ತೆ ಅಮಿತ್ ಷಾ ರಾಜ್ಯಕ್ಕೆ ಬರುವ ವೇಳೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಒಂದಷ್ಟು ಫಲಿತಾಂಶಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಮುಂದಾಗಿದ್ದಾರೆ.
