ಬೆಂಗಳೂರು [ಆ.02]:  ಶಾಸನ, ಸಂವಿಧಾನದ ಇತಿಹಾಸ ಹೇಳುವ ನೆಪದಲ್ಲಿ ರಾಷ್ಟ್ರೀಯ ಸ್ವಯಂ ಸಂಘದ (ಆರ್‌ಎಸ್‌ಎಸ್‌) ತೇಜೋವಧೆ ಮಾಡಲು ಪ್ರಯತ್ನಿಸಿದ್ದು, ಆರ್‌ಎಸ್‌ಎಸ್‌ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕಾದರೆ ಒಂದು ವಾರ ಶಾಕೆಗೆ ಹೋಗಬೇಕು ಎಂದು ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ ವಿರುದ್ಧ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯ ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಮಾತನಾಡಿ ನಯವಾಗಿಯೇ ಕಾಲೆಳೆಯುವ ಪ್ರಯತ್ನ ಮಾಡಿದರು. ಹಿಂದುತ್ವ, ವರ್ಣಶ್ರಮ ನಂಬಿರುವ ವ್ಯವಸ್ಥೆಯ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರು ಎಂದು ಹೇಳಿ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತ ಕಾಗೇರಿ ಅವರನ್ನು ನಾಜೂಕಾಗಿಯೇ ಟೀಕಿಸಿದರು. ರಮೇಶ್‌ ಕುಮಾರ್‌ ಅವರ ಜ್ಞಾನ ಸಂಪತ್ತು ಮೆಚ್ಚುವಂತಹದ್ದು. ಅಪಾರವಾದ ಜ್ಞಾನ ಅವರಿಗೆ ಇದೆ. ಆದರೆ, ಆರ್‌ಎಸ್‌ಎಸ್‌ ಅನ್ನು ತಿಳಿದುಕೊಂಡಿರುವ ರೀತಿ ಸರಿ ಇಲ್ಲ. ಆರ್‌ಎಸ್‌ಎಸ್‌ ಮಹತ್ವ ಮತ್ತು ಮೌಲ್ಯದ ಬಗ್ಗೆ ತಿಳಿದುಕೊಳ್ಳಬೇಕಾದರೆ ಒಂದು ವಾರಗಳ ಕಾಲ ಸಂಘದ ಶಾಖೆಗಳಿಗೆ ಹೋಗಬೇಕು ಎಂದು ಸುರೇಶ್‌ಕುಮಾರ್‌ ಗುರುವಾರ ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.

ಯಾರೋ ಹೇಳಿರುವುದನ್ನು ತಿಳಿದುಕೊಂಡು ಅದೇ ಪಳೆಯುಳಿಕೆಯ ಮಾತುಗಳನ್ನಾಡುವುದು ರಮೇಶ್‌ ಕುಮಾರ್‌ ಅವರಿಗೆ ಶೋಭೆ ತರುವುದಿಲ್ಲ. ಅವರು ನಮ್ಮ ವಿಚಾರಗಳನ್ನು ಒಪ್ಪಬೇಕಾಗಿಲ್ಲ, ಒಪ್ಪುವ ಅಗತ್ಯವೂ ಇಲ್ಲ. ಆದರೆ, ಇಲ್ಲದ ಸಂಗತಿಗಳನ್ನು ಹೇಳುವುದು ಅವರಿಗೆ ಭೂಷಣ ಅಲ್ಲ. ರಾಷ್ಟ್ರಪಿತ ಮಹಾತ್ಮಗಾಂಧಿ ಅವರು 1934ರಲ್ಲಿ ವಾದ್ರಾದಲ್ಲಿ ನಡೆದ ಕ್ಯಾಂಪ್‌ಗೆ ಭೇಟಿ ನೀಡಿದ್ದರು. ಈವೇಳೆ ಸಂಘದ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಸಂಘದ ಸರಸಂಚಾಲಕರನ್ನು ಹರಿಜನ ಎಷ್ಟುಮಂದಿ ಇದ್ದಾರೆ ಎಂದು ಕೇಳಿದ್ದರು. ಆದರೆ, ಹರಿಜನ ಎಷ್ಟುಮಂದಿ ಇದ್ದಾರೆ ಎಂಬುದು ಸಂಘದ ಮುಖ್ಯಸ್ಥರು ಗೊತ್ತಿಲ್ಲ ಎಂದು ಹೇಳಿದಾಗ ಗಾಂಧೀಜಿ ಅವರೇ ಕೇಳಿ ಮಾಹಿತಿ ಪಡೆದುಕೊಂಡಿದ್ದರು ಎಂದು ಹೇಳಿದರು.

ಆರ್‌ಎಸ್‌ಎಸ್‌ನಲ್ಲಿ ಶೇ.35ರಷ್ಟುಹರಿಜನ ವರ್ಗಕ್ಕೆ ಸೇರಿದವರಿದ್ದರು. ಸಂಘಕ್ಕೆ ಅದರ ಗುರುತು ಅಗತ್ಯ ಇಲ್ಲ. ಸಂಘದ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿಯೂ ಜಾತಿಯ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು.