ಹೆಚ್‌ಎಎಲ್ ಚರ್ಚೆಯಲ್ಲಿ ಬಿಜೆಪಿ ನಾಯಕನ ಉಡಾಫೆ ಉತ್ತರ| ಆ್ಯಂಕರ್ ಪ್ರಶ್ನೆಗೆ ಉಡಾಫೆ ಉತ್ತರ ನೀಡಿದ ಶಾನವಾಜ್ ಹುಸೇನ್| ಹೆಚ್‌ಎಎಲ್ ಕೈಯಲ್ಲಿ ಹಣ ಇಲ್ಲ ಎಂದ ಆ್ಯಂಕರ್| ನಮ್ಮದು ಕ್ಯಾಶಲೆಸ್ ಎಕಾನಮಿ ಎಂದ ಶಾನವಾಜ್ ಹುಸೇನೆ| ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಖಂಡನೆ

ನವದೆಹಲಿ(ಜ.08): ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಎಲ್ಲಾ ವೇದಿಕೆಗಳಲ್ಲೂ ಚರ್ಚೆಯಾಗುತ್ತಿದೆ. ಅದರಲ್ಲೂ ರಫೆಲ್ ಯುದ್ಧ ವಿಮಾನ ತಯಾರಿಸಲು ಹೆಚ್‌ಎಎಲ್‌ಗೆ ಏಕೆ ಕೊಟ್ಟಿಲ್ಲ ಎಂಬ ಚರ್ಚೆಯಂತೂ ಭಾರೀ ಮಹತ್ವ ಪಡೆದುಕೊಂಡಿದೆ.

ದೇಶದ ಮಾಧ್ಯಮಗಳಂತೂ ರಫೆಲ್ ಒಪ್ಪಂದ ಮತ್ತು ಹೆಚ್‌ಎಎಲ್ ಕುರಿತು ನಿತ್ಯವೂ ಗಂಭೀರ ಚರ್ಚೆಗಳನ್ನು ಕೈಗೆತ್ತಿಕೊಳ್ಳುತ್ತಿವೆ. ಈ ಚರ್ಚೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ವಕ್ತಾರರು ಪಾಲ್ಗೊಂಡು ತಮ್ಮ ತಮ್ಮ ವಾದ ಮಂಡಿಸುತ್ತಿದ್ದಾರೆ.

ಅದರಂತೆ ದೇಶದ ಜನಪ್ರಿಯ ನ್ಯೂಸ್ ಚಾನೆಲ್‌ಗಳಲ್ಲಿ ಒಂದಾದ ‘ಆಜ್ ತಕ್’ನಲ್ಲಿ ಹೆಚ್‌ಎಎಲ್ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಶಾನವಾಜ್ ಹುಸೇನ್ ಸಂಸ್ಥೆಗೆ ಅಪಹಾಸ್ಯ ಮಾಡುವಂತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

Scroll to load tweet…

ಚರ್ಚೆಯ ಸಂದರ್ಭದಲ್ಲಿ ಹೆಚ್‌ಎಎಲ್ ಬಳಿ ಹಣವಿಲ್ಲ ಎಂದು ಖುದ್ದು ಸಂಸ್ಥೆಯ ಮುಖ್ಯಸ್ಥರೇ ಹೇಳಿದ್ದಾರಲ್ಲ ಎಂದು ಆ್ಯಂಕರ್ ಶಾನವಾಜ್ ಹುಸೇನ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉಡಾಫೆಯಿಂದ ಉತ್ತರಿಸಿರುವ ಹುಸೇನ್, ನಮ್ಮದು ಕ್ಯಾಶಲೆಸ್ ಎಕಾನಮಿಯಾಗಿದ್ದು, ಹೆಚ್‌ಎಎಲ್ ಕೈಗೆ ನಾವೇಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

Scroll to load tweet…

ಭಾರತ ಸದ್ಯ ಕ್ಯಾಶಲೆಸ್ ಎಕಾನಮಿಯನ್ನು ಅಳವಡಿಸಿಕೊಂಡಿದ್ದು, ಹೆಚ್‌ಎಎಲ್ ಗೆ ಹಣದ ಅವಶ್ಯಕತೆ ಏನಿದೆ ಎಂದು ಶಾನವಾಜ್ ಹುಸೇನ್ ಪ್ರಶ್ನಿಸಿದ್ದಾರೆ. ಶಾನವಾಜ್ ಅವರ ಈ ಹೇಳಿಕೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.