ದಾವಣಗೆರೆ[ಅ.07]: ಅಧಿಕಾರ ಕಳೆದುಕೊಂಡು ಹುಚ್ಚರಾಗುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ನಿನ್ನೆ ತನಕ ಕೇಂದ್ರದಿಂದ ಪರಿಹಾರ ಬಂದಿಲ್ಲ ಎನ್ನುತ್ತಿದ್ದವರು, ಈಗ ಪರಿಹಾರ ಬಂದ ಮೇಲೆ ಇಷ್ಟೇನಾ ಎನ್ನುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಾವೂ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆವು. ಕುಮಾರಸ್ವಾಮಿಗೆ ನಾನು ಕೇಳಲು ಬಯಸುತ್ತೇನೆ. ನಿನ್ನೆ ತನಕ ಪರಿಹಾರವೇ ಬಂದಿಲ್ಲ ಎಂದು ಬಡಿದುಕೊಂಡಿದ್ದರು. ಇದೀಗ ಪರಿಹಾರದ ಹಣ ಬಂದ ಮೇಲೆ ಇಷ್ಟೇನಾ ಎನ್ನುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನ ಕುಮಾರಸ್ವಾಮಿ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಇನ್ನು ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಏನೋ ಕಳೆದು ಕೊಂಡ ನೋವಿನಲ್ಲಿದ್ದು, ಹೇಗಾದರೂ ಮಾಡಿ ವಿಪಕ್ಷ ನಾಯಕ ಸ್ಥಾನವನ್ನಾದರೂ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದರು.

ಜಾತಿ ಎತ್ತಿಕಟ್ಟಿ ಕೆಟ್ಟರು:

ಇನ್ನು ಕಾರ‍್ಯಕ್ರಮವೊಂದರಲ್ಲಿ ಮಾತನಾಡಿದ ಈಶ್ವರಪ್ಪ, ಜಾತಿ ವಿಚಾರವನ್ನು ಎತ್ತಿ ಕಟ್ಟಿದರೆ ಆ ಜಾತಿಯವರೆಲ್ಲಾ ತಮಗೆ ಮತ ನೀಡುತ್ತಾರೆಂದು, ಜಾತಿ ಜಾತಿ ಮಧ್ಯೆಯೇ ಎತ್ತಿ ಕಟ್ಟಿದವರು, ಜಾತಿಯನ್ನು ಒಡೆಯಲು ಪ್ರಯತ್ನಿಸಿದವರು ಕಳೆದ ಚುನಾವಣೆಗಳಲ್ಲಿ ನೆಗೆದು ಬಿದ್ದಿದ್ದಾರೆ. ಈಗ ನಾನು ತಪ್ಪು ಮಾಡಿದೆ, ನಾನು ತಪ್ಪು ಮಾಡಿದ್ದೇನೆಂದು ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ಮಾಡಿದರು.