ಬೆಂಗಳೂರು [ಜು.15] :  ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉಳಿದಿರುವ ಏಕೈಕ ರಾಜಮಾರ್ಗ ಎಂದರೆ ಅದು ರಾಜೀನಾಮೆ ಪತ್ರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಡುವ ಮೂಲಕ ಅಪಮಾನವಾಗುವುದನ್ನು ತಪ್ಪಿಸಿಕೊಳ್ಳಬೇಕು. ರಾಜಧರ್ಮದ ಬೋಧನೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕೂಡ ಮುಖ್ಯಮಂತ್ರಿಗಳನ್ನು ಮನೆಗೆ ಕರೆಸಿಕೊಂಡು ರಾಜೀನಾಮೆ ಮಾರ್ಗದ ಬೋಧನೆ ಮಾಡುತ್ತಾರೆ ಎಂದೆನಿಸುತ್ತದೆ ಎಂದರು. 

ಎಂಟಿಬಿ ನಾಗರಾಜ್‌ ಅವರ ಮನವೊಲಿಕೆ ಕಸರತ್ತು ಸಕ್ಸಸ್‌ ಆಲ್ಲ ಎಂದು ಹೇಳಿದ್ದೆ. ಅದು ಸಕ್ಸಸ್‌ ಆಗಲಿಲ್ಲ, ಬದಲಿಗೆ ಸರ್ಕಸ್‌ ಆಯ್ತು ಎಂದು ವ್ಯಂಗ್ಯವಾಡಿದರು. ಬಿಜೆಪಿ ಮುಂದಿನ ನಡೆಯ ಬಗ್ಗೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.