ನವದೆಹಲಿ(ಜು.19): ಭಾರತೀಯರು ಋಷಿಮುನಿಗಳ ಸಂತಾನ ಎಂಬುದು ತಮ್ಮ ನಂಬಿಕೆಯಾಗಿದ್ದು, ಚಾರ್ಲ್ಸ್ ಡಾರ್ವಿನ್’ನ ಜೀವ ವಿಕಾಸ ಸಿದ್ಧಾಂತವನ್ನು ತಿರಸ್ಕರಿಸುವುದಾಗಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಇಂದು ಮಾತನಾಡಿದ ಸತ್ಯಪಾಲ್ ಸಿಂಗ್, ಭಾರತೀಯರು ಪುರಾತನ ಋಷಿಮುನಿಗಳ ಸಂತಾನರಾಗಿದ್ದು, ಡಾರ್ವಿನ್’ನ ಮಂಗನಿಂದ ಮಾನವ ಸಿದ್ಧಾಂತವನ್ನು ತಾವು ಒಪ್ಪುವದಿಲ್ಲ ಎಂದು ಹೇಳಿದ್ದಾರೆ.

ಮಾನವ ಹಕ್ಕುಗಳ ಕಾನೂನು ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಸತ್ಯಪಾಲ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ನಾವು ಋಷಿಮುನಿಗಳ ಪುತ್ರರಾಗಿದ್ದು, ನಮ್ಮ ಸಂಸ್ಕೃತಿಯಲ್ಲಿ ಮಾನವ ಹಕ್ಕು ಎಂಬ ಕಲ್ಪನೆಯೇ ಇಲ್ಲ ಎಂದು ಸತ್ಯಪಾಲ್ ವಾದಿಸಿದರು.

ಇನ್ನು ಸತ್ಯಪಾಲ್ ಹೇಳಿಕೆಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಸಂಸದರ ಮಾನವ ಹಕ್ಕುಗಳ ಕುರಿತಾದ ಹೇಳಿಕೆ ಅಚ್ಚರಿ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದವು. 

ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್, ಮೋದಿ 1.0 ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು ಎಂಬುದು ವಿಶೇಷ.