ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಮೈತ್ರಿ ಸರ್ಕಾರ ಉರುಳಿಸುವ ಯತ್ನಗಳು ಜೋರಾಗಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಸರ್ಕಾರ ಉರುಳಿಸಲು ಪ್ಲಾನ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಬೆಂಗಳೂರು/ ಗೋಕಾಕ್ : ಸಚಿವ ಸ್ಥಾನ ಮಾತ್ರವಲ್ಲ, ನಿಗಮ ಮಂಡಳಿಗೂ ತಮ್ಮನ್ನು ಪರಿಗಣಿಸದೇ ಶಿಕ್ಷೆ ವಿಧಿಸಿರುವ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸೆಟೆದು ನಿಂತಿರುವ ಕಾಂಗ್ರೆಸ್ನ ಅತೃಪ್ತ ಶಾಸಕರ ಗುಂಪೊಂದು ಸಮ್ಮಿಶ್ರ ಸರ್ಕಾರ ಕೆಡವಲು ಮಾಡು ಇಲ್ಲವೇ ಮಡಿ ಎಂಬಂತಹ ಪ್ರಯತ್ನಕ್ಕೆ ಮುಂದಾಗಿದ್ದು, ಇದಕ್ಕೆ ಬಿಜೆಪಿಯ ದೊಡ್ಡ ಮಟ್ಟದ ಬೆಂಬಲ ದೊರಕಿದೆ ಎನ್ನಲಾಗಿದೆ.
ಸಚಿವ ಸ್ಥಾನದಿಂದ ಕೊಕ್ ಪಡೆದ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಒಗ್ಗೂಡಿರುವ ಈ ಅತೃಪ್ತ ಶಾಸಕರ ಗುಂಪು, ಯಾವುದೇ ಬಹಿರಂಗ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದೆ ಗುಪ್ತವಾಗಿ ಕಾಂಗ್ರೆಸ್ನ ಸ್ಥಾನ ವಂಚಿತ ಶಾಸಕರನ್ನು ಸಂಪರ್ಕಿಸಲು ಮುಂದಾಗಿದೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಗೆ ಬೇಕಿರುವ ಸಂಖ್ಯಾಬಲವನ್ನು ಒಗ್ಗೂಡಿಸಲು ಈ ಗುಂಪು ತನ್ನೆಲ್ಲ ಸಾಮರ್ಥ್ಯ ವಿನಿಯೋಗಿಸಿದೆ ಎಂದು ಮೂಲಗಳು ಹೇಳಿವೆ. ಈ ಮೂಲಗಳ ಪ್ರಕಾರ 18ರಿಂದ 20 ಶಾಸಕರನ್ನು ಒಗ್ಗೂಡಿಸುವಂತೆ ಈ ಗುಂಪಿಗೆ ಬಿಜೆಪಿಯಿಂದ ಸೂಚನೆ ಬಂದಿದ್ದು, ಅದರಂತೆ ಈ ಸಂಖ್ಯಾಬಲವನ್ನು ಒಗ್ಗೂಡಿಸಲು ಪ್ರಯತ್ನ ಆರಂಭಿಸಿದೆ ಎಂದು ತಿಳಿದುಬಂದಿದೆ.
ಒಂದು ಬಾರಿ ಉತ್ತಮ ಸಂಖ್ಯಾಬಲ ದೊರೆತರೆ ಬಹಿರಂಗಕ್ಕೆ ಬರಲಿರುವ ಈ ಗುಂಪು ಕಾಂಗ್ರೆಸ್ಗೆ ರಾಜೀನಾಮೆಯನ್ನು ಪ್ರಕಟಿಸಲಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಮುಂದಿನ 10 ದಿನಗಳೊಳಗೆ ಮುಗಿಸುವ ಗುರಿಯನ್ನು ಈ ಗುಂಪಿಗೆ ನೀಡಲಾಗಿದ್ದು, ಒಂದು ವೇಳೆ ಈ ಗುರಿಯನ್ನು ಅತೃಪ್ತರ ಗುಂಪು ಮುಟ್ಟದಿದ್ದಲ್ಲಿ ಬಿಜೆಪಿ ನಾಯಕತ್ವವೇ ಇಡೀ ಕಾರ್ಯಾಚರಣೆಯನ್ನು ತನ್ನ ಕೈಗೆ ತೆಗೆದುಕೊಳ್ಳಲಿದೆ. ಸಂಖ್ಯಾಬಲದಿಂದ ಸರ್ಕಾರ ಕೆಡವಲು ಸಾಧ್ಯವಾಗದಿದ್ದಲ್ಲಿ ಅನ್ಯ ಮಾರ್ಗಗಳಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವೂ ನಡೆಯಲಿದೆ ಎಂದು ತಿಳಿದುಬಂದಿದೆ.
ಒಂದು ಮೂಲದ ಪ್ರಕಾರ ಈ ಗುಂಪಿನ ನಾಯಕತ್ವವನ್ನು ಸಚಿವ ಸ್ಥಾನದಿಂದ ಕೊಕ್ ಪಡೆದ ರಮೇಶ್ ಜಾರಕಿಹೊಳಿ ಹೊತ್ತಿದ್ದಾರೆ. ಅವರ ಹಿಂದೆ ಬಿಜೆಪಿಯ ದೊಡ್ಡ ಮಟ್ಟದ ನಾಯಕರು ಇದ್ದಾರೆ ಎನ್ನಲಾಗಿದೆ. ಅವರ ಮಾರ್ಗದರ್ಶನದಲ್ಲೇ ರಮೇಶ್ ಜಾರಕಿಹೊಳಿ ಗುಂಪು ಆಪರೇಷನ್ ಆರಂಭಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಗೋಕಾಕ್ನಿಂದ ಬೆಂಗಳೂರಿನತ್ತ ರಮೇಶ್ ಜಾರಕಿಹೊಳಿ ಧಾವಿಸಿದರು ಎನ್ನಲಾಗಿದ್ದರೂ, ತಡರಾತ್ರಿಯವರೆಗೂ ಅವರು ಬೆಂಗಳೂರು ಮುಟ್ಟಿರಲಿಲ್ಲ. ಬಹುತೇಕ ಸೋಮವಾರ ತಮ್ಮ ಆಪ್ತರ ಸಭೆಯೊಂದನ್ನು ಅವರು ಬೆಂಗಳೂರಿನಲ್ಲಿ ನಡೆಸಲಿದ್ದು, ಅಲ್ಲಿ ಕಾಂಗ್ರೆಸ್ಗೆ ಒಂದು ಸ್ಪಷ್ಟಸಂದೇಶ ನೀಡಲಿದ್ದಾರೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ:
ಇನ್ನು ಭಾನುವಾರ ಗೋಕಾಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಪ್ರಕಟಿಸಿದರು.
ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದೇನೆ. ರಾಜಿನಾಮೆಯನ್ನು ಇಂದೇ ಸಲ್ಲಿಸಬಹುದು ಅಥವಾ ಒಂದು ವಾರ ಕಾಲಾವಕಾಶ ತೆಗೆದುಕೊಳ್ಳಬಹುದು. ನನ್ನ ಜತೆ ಬರುವ ಶಾಸಕರ ಸಂಖ್ಯೆಯನ್ನು ಸದ್ಯ ಬಹಿರಂಗಪಡಿಸುವುದಿಲ್ಲ. ಸಮಯ ಬಂದಾಗ ನಾನೇ ಮಾಧ್ಯಮದವರನ್ನು ಕರೆಯಿಸಿ ಹೇಳುತ್ತೇನೆ ಎಂದರು.
ನನ್ನ ದೂರವಾಣಿ ಕರೆಗಳನ್ನು ಕದ್ದು ಕೇಳಲಾಗುತ್ತಿದೆ. ಅದು ನನಗೆ ಗೊತ್ತಿದೆ. ಆದರೆ, ನಾನು ಯಾವುದಕ್ಕೂ ಹಿಂಜರಿಯುವುದಿಲ್ಲ ಎಂದೂ ಅವರು ಹೇಳಿದರು.
ರಾಜೀನಾಮೆ ನೀಡಿದರೂ ಅಂಗೀಕರಿಸುವುದಿಲ್ಲ!
ರಮೇಶ್ ಜಾರಕಿಹೊಳಿ ನೇತೃತ್ವದ ಶಾಸಕರ ಗುಂಪು ರಾಜೀನಾಮೆ ಸಲ್ಲಿಸುವ ಹಂತ ಮುಟ್ಟಿದರೆ, ಅದನ್ನು ನಿಭಾಯಿಸಲು ಕಾಂಗ್ರೆಸ್ ಸಹ ಸಜ್ಜಾಗಿದೆ ಎನ್ನಲಾಗಿದೆ.
ವಾಸ್ತವವಾಗಿ ರಮೇಶ್ ಜಾರಕಿಹೊಳಿ ಅವರೊಂದಿಗೆ ಸ್ಪಷ್ಟವಾಗಿ ಎಷ್ಟುಮಂದಿ ಶಾಸಕರು ಇದ್ದಾರೆ ಅಥವಾ ಸೇರುತ್ತಾರೆ ಎಂಬುದು ಸ್ಪಷ್ಟವಿಲ್ಲ. ಒಂದು ಬಾರಿ ಈ ಗುಂಪು ಬಹಿರಂಗಕ್ಕೆ ಬಂದು ರಾಜೀನಾಮೆ ಸಲ್ಲಿಸಿದರೂ ಅದನ್ನು ಅಂಗೀಕರಿಸದೇ ವಿಳಂಬ ಮಾಡುವ ಹಾಗೂ ಈ ವಿಳಂಬದ ಅವಧಿಯಲ್ಲಿ ರಮೇಶ್ ಜತೆ ಗುರುತಿಸಿಕೊಂಡಿರುವ ಶಾಸಕರನ್ನು ಮನವೊಲಿಸುವ ಪ್ರಕ್ರಿಯೆ ಆರಂಭಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಶಾಸಕರು ರಾಜೀನಾಮೆಯನ್ನು ಸ್ಪೀಕರ್ ಅವರಿಗೆ ನೀಡಬೇಕು. ರಾಜೀನಾಮೆಯನ್ನು ಅಂಗೀಕರಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡುವಂತೆ ಸ್ಪೀಕರ್ ಅವರಿಗೆ ಈಗಾಗಲೇ ಸೂಚನೆ ಹೋಗಿದೆ ಎಂದು ಈ ಮೂಲಗಳು ಹೇಳುತ್ತವೆ.
ಅಲ್ಲದೆ, ರಮೇಶ್ ಜಾರಕಿಹೊಳಿ ಹಾಗೂ ಅವರ ಆಪ್ತ ಕೆಲ ಶಾಸಕರನ್ನು ಹೊರತುಪಡಿಸಿ, ಉಳಿದ ಅಸಮಾಧಾನ ಹೊಂದಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹಾಗೂ ಅತೃಪ್ತರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಲು ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಸೂಚಿಸಿದೆ. ಅದರಂತೆ ರಾಜ್ಯ ನಾಯಕರು ಅತೃಪ್ತರ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಮಾಧ್ಯಮದವರ ಮೇಲೆ ರಮೇಶ್ ಗರಂ
ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟವಿಚಾರ ತಿಳಿಯುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದ ಗೋಕಾಕ್‌ನ ಶಾಸಕ ರಮೇಶ್ ಜಾರಕಿಹೊಳಿ, ಭಾನುವಾರ ಬೆಳಗ್ಗೆ ಗೋಕಾಕ್ ಫಾಲ್ಸ್‌ನ ಕೈಗಾರಿಕಾ ಪ್ರದೇಶದಲ್ಲಿರುವ ಬ್ಯಾಡ್ಮಿಂಟನ್ ಅಂಗಳದಲ್ಲಿ ದಿಢೀರ್ ಪ್ರತ್ಯಕ್ಷವಾದರು.
ಈ ವೇಳೆ ಸಚಿವ ಸ್ಥಾನದಿಂದ ಕೈಬಿಟ್ಟಕುರಿತು ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮಗಳ ಮೇಲೆ ಗರಂ ಆದ ರಮೇಶ್ ಜಾರಕಿಹೊಳಿ, ನನ್ನನ್ನು ಹಾಳು ಮಾಡಿದ್ದು ದೃಶ್ಯ ಮಾಧ್ಯಮದವರು ಎಂದು ನೇರವಾಗಿ ಮಾಧ್ಯಮದವರ ವಿರುದ್ಧ ಗುಡುಗಿದರು. ಅಲ್ಲದೇ ಸಂಪುಟದಿಂದ ಕೈಬಿಟ್ಟಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
