ಗೋವಾದಲ್ಲೂ ಬಿಜೆಪಿಗೆ ಬೆಂ. ದಕ್ಷಿಣ ರೀತಿ ಟ್ರಬಲ್‌| ಪಣಜಿ ಬೈ ಎಲೆಕ್ಷನ್‌ಗೆ ಪರ್ರಿಕರ್‌ ಪುತ್ರ ಸೇರಿ ಇಬ್ಬರ ಹೆಸರು ಶಿಫಾರಸು| ತೇಜಸ್ವಿನಿಗೆ ಟಿಕೆಟ್‌ ನಿರಾಕರಿಸಿದ್ದ ಹೈಕಮಾಂಡ್‌ ಈಗ ಏನು ಮಾಡುತ್ತೆ?

ಪಣಜಿ[ಏ.26]: ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ ಪರ್ರಿಕರ್‌ ನಿಧನದಿಂದ ತೆರವಾಗಿರುವ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪರ್ರಿಕರ್‌ ಹಿರಿಯ ಪುತ್ರ ಉತ್ಪಲ್‌ ಸೇರಿ ಇಬ್ಬರ ಹೆಸರನ್ನು ಗೋವಾ ಬಿಜೆಪಿ ಘಟಕ ಅಂತಿಮಗೊಳಿಸಿದೆ. ಈ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಹೊಣೆಯನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯ ವಿವೇಚನೆಗೆ ಬಿಟ್ಟಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ದಿವಂಗತ ಅನಂತ ಕುಮಾರ್‌ ಅವರ ಪತ್ನಿಗೆ ಕುಟುಂಬ ರಾಜಕಾರಣದ ಹೆಸರಿನಲ್ಲಿ ಟಿಕೆಟ್‌ ನಿರಾಕರಿಸಿದ್ದ ಬಿಜೆಪಿ, ಪರ್ರಿಕರ್‌ ಪುತ್ರನ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಉತ್ಪಲ್‌ ಪರ್ರಿಕರ್‌ ಹಾಗೂ ಸಿದ್ಧಾಥ್‌ರ್‍ ಕುಂಕೋಲಿಯೆಂಕರ್‌ ಹೆಸರನ್ನು ರಾಜ್ಯ ಬಿಜೆಪಿ ಘಟಕ ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ರವಾನಿಸಿದೆ ಎಂದು ಗೋವಾ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮೇ 19ರಂದು ಉಪಚುನಾವಣೆ ನಡೆಯಲಿದೆ. 38 ವರ್ಷದ ಉತ್ಪಲ್‌ ಅವರು ಅಮೆರಿಕದಲ್ಲಿ ವ್ಯಾಸಂಗ ಮಾಡಿ ಸದ್ಯ ಉದ್ಯಮ ನಡೆಸುತ್ತಿದ್ದಾರೆ. 2015, 2017ರಲ್ಲಿ ಪಣಜಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿದ್ಧಾಥ್‌ರ್‍ ಅವರು ಪರ್ರಿಕರ್‌ ವಿಧಾನಸಭೆ ಪ್ರವೇಶಕ್ಕಾಗಿ 2017ರಲ್ಲಿ ರಾಜೀನಾಮೆ ನೀಡಿದ್ದರು.