ತಿರುವನಂತಪುರ: ಅಯೋಧ್ಯೆ ರಾಮಮಂದಿರ ವಿವಾದ ಭುಗಿಲೆದ್ದಾಗ ದೇಶಾದ್ಯಂತ ರಥಯಾತ್ರೆ ನಡೆಸಿ ಬಿಜೆಪಿ ತನ್ನ ಬಲವರ್ಧನೆ ಮಾಡಿಕೊಂಡಿದ್ದು ಇತಿಹಾಸ. ಇದೀಗ ಅದೇ ತಂತ್ರಗಾರಿಕೆಯನ್ನು ಕೇರಳದಲ್ಲೂ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಸದ್ಯ ತಾರಕಕ್ಕೇರಿರುವ ಶಬರಿಮಲೆ ವಿವಾದವನ್ನು ಮುಂದಿಟ್ಟುಕೊಂಡು ಆರು ದಿನಗಳ ರಥಯಾತ್ರೆ ಆಯೋಜಿಸಿದೆ.

ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನ ಮಧೂರು ದೇಗುಲದಲ್ಲಿ ನ.8ರಂದು ಆರಂಭವಾಗಲಿರುವ ಈ ಯಾತ್ರೆ, ಕೇರಳದ ವಿವಿಧೆಡೆ ಆರು ದಿನಗಳ ಕಾಲ ಸಂಚರಿಸಿ ನ.13ರಂದು ಶಬರಿಮಲೆ ಬಳಿ ಅಂತ್ಯಗೊಳ್ಳಲಿದೆ. ಶಬರಿಮಲೆ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಪುನರ್‌ಪರಿಶೀಲನೆ ಅರ್ಜಿಗಳು ಅಂದೇ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ.

ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೈ, ಕೇರಳದಲ್ಲಿನ ಬಿಜೆಪಿ ಮಿತ್ರ ಪಕ್ಷ ಭಾರತ ಧರ್ಮ ಜನಸೇನಾ ಅಧ್ಯಕ್ಷ ತುಷಾರ್‌ ವೆಲ್ಲಪಳ್ಳಿ ಹಾಗೂ ಹಿಂದುಳಿದ ಈಳವ ಸಮುದಾಯದ ನಾಯಕ ವೆಲ್ಲಪಳ್ಳಿ ನಟೇಶನ್‌ ಅವರು ಯಾತ್ರೆಯ ನೇತೃತ್ವ ಹೊತ್ತುಕೊಳ್ಳಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರೂ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

ಕೇರಳದಲ್ಲಿ ಅತ್ಯಂತ ಭಾವನಾತ್ಮಕ ವಿಷಯವಾಗಿ ಪರಿಣಮಿಸಿರುವ ಶಬರಿಮಲೆ ವಿವಾದವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ನೆಲೆಯೂರುವುದು ಬಿಜೆಪಿ ಆಲೋಚನೆ. ಕೇವಲ ಹಿಂದುಗಳನ್ನಷ್ಟೇ ಗುರಿಯಾಗಿಸಿಕೊಂಡು ಈ ಯಾತ್ರೆ ನಡೆಯುತ್ತಿಲ್ಲ. ದಾರಿಯುದ್ದಕ್ಕೂ ಬರುವ 52 ಕ್ರೈಸ್ತ ಸಂಸ್ಥೆಗಳು, ಬಿಷಪ್‌ ಮನೆಗಳು, 12 ಇಸ್ಲಾಮಿಕ್‌ ಕೇಂದ್ರಗಳಿಗೂ ತೆರಳಿ ಆಶೀರ್ವಾದ ಪಡೆಯುವ ಯೋಜನೆಯನ್ನು ರೂಪಿಸಲಾಗಿದೆ.