ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಕೆಲವು ಮುಖಂಡರು ನೀಡುತ್ತಿರುವ ವಿವಾದಾತ್ಮಕ ಹಾಗೂ ಅನಗತ್ಯ ಕೀಳು ಮಟ್ಟದ ಹೇಳಿಕೆಗಳ ಬಗ್ಗೆ ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು (ಡಿ.26): ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಕೆಲವು ಮುಖಂಡರು ನೀಡುತ್ತಿರುವ ವಿವಾದಾತ್ಮಕ ಹಾಗೂ ಅನಗತ್ಯ ಕೀಳು ಮಟ್ಟದ ಹೇಳಿಕೆಗಳ ಬಗ್ಗೆ ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ರೀತಿಯ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಹೆಚ್ಚು ಧಕ್ಕೆ ಉಂಟಾಗುತ್ತಿದೆ. ‘ನಕಾರಾತ್ಮಕ ರಾಜಕಾರಣ’ದಿಂದ ಪಕ್ಷಕ್ಕೆ ಅನುಕೂಲವಾಗುವುದಿಲ್ಲ, ಬದಲಿಗೆ ನಷ್ಟವೇ ಹೆಚ್ಚು. ಇದನ್ನು ಈಗಲೇ ಸರಿ ಮಾಡಿಕೊಳ್ಳದಿದ್ದರೆ, ಇದಕ್ಕೆ ಕಡಿವಾಣ ಬೀಳದಿದ್ದರೆ ಚುನಾವಣೆಯಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ ಎಂಬ ಅಭಿಪ್ರಾಯವನ್ನು ಹಿರಿಯ ನಾಯಕರು ವರಿಷ್ಠರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ ವಿರೋಧಿಗಳನ್ನು ಜರಿಯಲು ಬಳಸುವ ಭಾಷೆಯ ಮೇಲೆ ಹಿಡಿತ ಕಡಿಮೆಯಾಗುತ್ತಿದೆ. ಇದು ಬಿಜೆಪಿಯ ಸಂಸ್ಕೃತಿ ಅಲ್ಲ. ಬಿಜೆಪಿ ಮತ್ತು ಅದರ ಮುಖಂಡರನ್ನು ಜನರು ನೋಡುವ ದೃಷ್ಟಿಯೇ ಬೇರೆ ಇದೆ. ಜನರ ಭಾವನೆಗೆ ವಿರುದ್ಧವಾಗಿ ನಮ್ಮ ಪಕ್ಷದ ಕೆಲವು ಮುಖಂಡರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ತಲುಪಿಸಲಾಗಿದೆ.

ರಾಜ್ಯಕ್ಕೆ ಆಗಮಿಸಿರುವ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರ ಗಮನಕ್ಕೂ ಈ ವಿಷಯ ಬಂದಿದ್ದು, ಅವರು ಕೂಡ ಅತೃಪ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ ಗುಜರಾತ್ ಫಲಿತಾಂಶದ ನಂತರ ಮೊದಲ ಬಾರಿಗೆ ಮಂಗಳವಾರ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪಕ್ಷದ ಕೆಲವು ಮುಖಂಡರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸಮಾಲೋಚನೆ ನಡೆದು ಬ್ರೇಕ್ ಹಾಕುವ ಸಾಧ್ಯತೆಯೂ ಇದೆ. ಭಾನುವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿದ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಪಕ್ಷದ ಕೆಲವು ನಾಯಕರು, ಹಿತೈಷಿಗಳನ್ನು ಭೇಟಿ ಮಾಡಿ ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಈ ವೇಳೆ ಪಕ್ಷದ ಕೆಲವು ಮುಖಂಡರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು ಮತ್ತು ಭಾಷೆಯ ಎಲ್ಲೆ ಮೀರಿ ಟೀಕೆ ಮಾಡುತ್ತಿರುವ ಬಗ್ಗೆ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿದು ಮೂಲಗಳು ತಿಳಿಸಿ ವಿಚಿತ್ರ ಸಂಗತಿ ಎಂದರೆ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿದಂತೆ ಮೂವರು ಸಂಸದರು ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ದೂರು ವರಿಷ್ಠರನ್ನು ತಲುಪಿದೆ.

ಅನಂತಕುಮಾರ್ ಹೆಗಡೆ ಹೊರತುಪಡಿಸಿ ಸಂಸದರಾದ ಪ್ರತಾಪ್ ಸಿಂಹ ಮತ್ತು ಶೋಭಾ ಕರಂದ್ಲಾಜೆ ಅಲ್ಲದೆ ಕೆಲವೆಡೆ ಸ್ಥಳೀಯ ಮುಖಂಡರೂ ಅನಗತ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ನಾವು ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಬೇಕು ಎಂಬುದರಲ್ಲಿ ಅನುಮಾನವಿಲ್ಲ. ಜತೆಗೆ ಪ್ರತಿಪಕ್ಷಗಳ ಮುಖಂಡರ ಟೀಕೆಗಳಿಗೆ ತೀಕ್ಷ್ಣ ಉತ್ತರವನ್ನೂ ಕೊಡಬೇಕು.

ಆದರೆ, ಆ ಭರದಲ್ಲಿ ಲಕ್ಷ್ಮಣ ರೇಖೆ ದಾಟುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಜಾವಡೇಕರ್ ಅವರಿಗೆ ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನು ಮುಂದಿಟ್ಟುಕೊಂಡು ಜಾವಡೇಕರ್ ಅವರು ಮಂಗಳವಾರದ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ಬ್ರೇಕ್ ಹಾಕುವರೇ ಎಂಬುದು ಕುತೂಹಲಕರವಾಗಿದೆ.