ಸರ್ಕಾರದ ನಿರ್ಧಾರಕ್ಕೆ ರಾಜ್ಯದ ವಿವಿಧ ಹಿಂದೂ ಸಂಘಟನೆಗಳು, ಬಿಜೆಪಿ, ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿವೆ. ಜನರ ಆಶಯಕ್ಕೆ ಬೆಂಬಲವಾಗಿ ನಿಂತು ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಬಿಜೆಪಿ ಸೇರಿದಂತೆ ವಿಪಕ್ಷಗಳು ಒತ್ತಾಯಿಸುತ್ತಿವೆ

ತಿರುವನಂತಪುರ: ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಿರುವ ಸುಪ್ರೀಂಕೋರ್ಟ್‌ ಆದೇಶ ಪ್ರಶ್ನಿಸಿದೇ ಇರುವ ಕೇರಳದ ಸರ್ಕಾರದ ನಿರ್ಧಾರ ವಿರೋಧಿಸಿ, ಬಿಜೆಪಿ ಕಾರ್ಯಕರ್ತರು ಸೋಮವಾರ ರಾಜಧಾನಿ ತಿರುವನಂತಪುರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಶಬರಿಮಲೆ ದೇಗುಲದ ಬಾಗಿಲು ತೆರೆಯುವ 2 ದಿನ ಮೊದಲು ನಡೆದ ವಿಧಾನಸೌಧ ಮುತ್ತಿಗೆ ರಾರ‍ಯಲಿ, ಬಿಜೆಪಿಯ ಶಕ್ತಿಪ್ರದರ್ಶನಕ್ಕೆ ವೇದಿಕೆಯೂ ಆಯಿತು. ಈ ಪ್ರತಿಭಟನೆ ವೇಳೆ ಕರ್ನಾಟಕದ ಸಂಸದ ನಳಿನ್‌ಕುಮಾರ್‌ ಕಟೀಲು ಹಾಗೂ ಹಲವು ಬಿಜೆಪಿ ಶಾಸಕರು ಕೂಡಾ ಭಾಗಿಯಾಗಿದ್ದರು.

ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೊಟ್ಟಿದ್ದನ್ನು ಒಪ್ಪಿಕೊಂಡ ಕೇರಳ ಸರ್ಕಾರದ ನಿರ್ಧಾರಕ್ಕೆ ರಾಜ್ಯದ ವಿವಿಧ ಹಿಂದೂ ಸಂಘಟನೆಗಳು, ಬಿಜೆಪಿ, ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿವೆ. ಜನರ ಆಶಯಕ್ಕೆ ಬೆಂಬಲವಾಗಿ ನಿಂತು ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಬಿಜೆಪಿ ಸೇರಿದಂತೆ ವಿಪಕ್ಷಗಳು ಒತ್ತಾಯಿಸುತ್ತಿವೆ.

ಇದೇ ವಿಷಯವನ್ನು ಮುಂದಿಟ್ಟುಕೊಂಡು ಅ.10ರಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಪಂಡಲಂನಿಂದ ತಿರುವನಂತಪುರದವರೆಗೆ ಶಬರಿಮಲೆ ಉಳಿಸಿ ಎಂಬ ಬೃಹತ್‌ ಪ್ರತಿಭಟನಾ ರಾರ‍ಯಲಿ ಹಮ್ಮಿಕೊಂಡಿತ್ತು. ಇದರ ಕಡೆಯ ದಿನವಾದ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಿದರು.

ಈ ವೇಳೆ ಅಯ್ಯಪ್ಪ ಸ್ವಾಮಿಗೆ ಜೈಕಾರ ಹಾಕುತ್ತಾ, ಕೈಯಲ್ಲಿ ಅಯ್ಯಪ್ಪನ ಫೋಟೋ ಹಿಡಿದು ಕಾರ್ಯಕರ್ತರು ರಸ್ತೆಯಲ್ಲಿ ಸಾಗಿಬಂದರು. ಈ ವೇಳೆ ಮಾತನಾಡಿದ ಬಿಜೆಪಿ ನಾಯಕರು, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಎಲ್‌ಡಿಎಫ್‌ ಸರ್ಕಾರ, ಸುಪ್ರೀಂ ತೀರ್ಪಿನಿಂದ ಉಂಟಾಗಿರುವ ವಿವಾದ ಇತ್ಯರ್ಥಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಬಿಜೆಪಿ ಮತ್ತೊಂದು ಸುತ್ತಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.