ಹೈದರಾಬಾದ್: ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯನಿರ್ವ ಹಿಸುವ ಸಂಸ್ಥೆಯೊಂದರ ಅಧ್ಯಕ್ಷಗಿರಿ ಕೊಡಿಸುವು ದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 2.17 ಕೋಟಿ ರು.  ವಂಚಿಸಿದ ಆರೋಪವೊಂದು ಕರ್ನಾಟಕದ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮತ್ತು ಅವರ ಆಪ್ತರ ಮೇಲೆ ಕೇಳಿಬಂದಿದೆ. 

ಅಲ್ಲದೆ ಆರೋಪಿಗಳ ಮೇಲೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ನಕಲು ಮಾಡಿದಂಥ ಗಂಭೀರ ಆರೋಪವನ್ನೂ ಮಾಡಲಾಗಿದೆ. ಈ ಸಂಬಂಧ ರಾವ್ ಹಾಗೂ ಇತರೆ 8 ಜನರ ವಿರುದ್ಧ ಕೇಸು ದಾಖಲಿಸಲಾಗಿದೆ.

ಆದರೆ, ತಮ್ಮ ವಿರುದ್ಧದ ಈ ಗಂಭೀರ ಆರೋಪವನ್ನು ತಳ್ಳಿ ಹಾಕಿರುವ ಮುರಳೀಧರ ರಾವ್ ಅವರು, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. 

ಏನೀ ಪ್ರಕರಣ?: ಫಾರ್ಮಾ ಎಕ್ಸಿಲ್ ಎಂಬ ಕಂಪನಿಯ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿ ರಾವ್ ಅವರ ಆಪ್ತರು ತಮ್ಮಿಂದ 2.17 ಕೋಟಿ ರು. ಹಣ ಪಡೆದಿದ್ದರು. ಅಲ್ಲದೆ ಹಣ ಪಡೆಯುವ ಮುನ್ನ ತಮ್ಮನ್ನು ನಂಬಿಸುವ ಸಲುವಾಗಿ, ನೇಮಕಾತಿ ಪತ್ರವನ್ನು ತೋರಿಸಿದ್ದರು. ಅದರಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ಕೂಡಾ ಇತ್ತು. 

ಆದರೆ ಹಣ ನೀಡಿದ ಬಳಿಕ ನಮಗೆ ವಂಚಿಸಲಾಗಿದೆ. ಬಳಿಕ ಹಣ ಕೇಳಿದರೆ ರಾವ್ ಮತ್ತು ಅವರ ಆಪ್ತರು ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂತ್ರಸ್ತ ಮಹಿಪಾಲ್ ರೆಡ್ಡಿ ಎಂಬುವವರು ಆರೋಪಿಸಿದ್ದಾರೆ.

ಇದೀಗ ಮಹಿಪಾಲ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ನ್ಯಾಯಾಲಯ ನೀಡಿದ ನಿರ್ದೇಶನದಿಂದಾಗಿ ಮಂಗಳವಾರವೇ ಮುರಳೀಧರ ರಾವ್ ಹಾಗೂ ಇತರ 8 ಮಂದಿ ವಿರುದ್ಧ ವಂಚನೆ, ನಕಲು ಸೇರಿದಂತೆ ಇತರ ಐಪಿಸಿ ಸೆಕ್ಷನ್‌ಗಳಡಿ ಕೇಸ್ ದಾಖಲಿಸಿ ಕೊಳ್ಳಲಾಗಿದೆ ಎಂದಿದ್ದಾರೆ ಪೊಲೀಸರು.