ನವದೆಹಲಿ, (ಜೂನ್.12): ಇದೇ ಜೂನ್ 17ರಿಂದ ಜುಲೈ 28ರ ವರೆಗೆ ನಡೆಯಲಿರುವ ಲೋಕಸಭೆಯ ಅಧಿವೇಶನಕ್ಕೆ ಬಿಜೆಪಿ ಸಂಸದೀಯ ಕಾರ್ಯಕಾರಿ ಸಮಿತಿ ರಚನೆಯಾಗಿದೆ.

 ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಲೋಕಸಭೆಯ ಮಹಿಳಾ ಸಚೇತಕಿ ಆಗಿ ನೇಮಿಸಲಾಗಿದೆ. ಇನ್ನು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಸಹ ಸಚೇತಕರಾಗಿ ಆಯ್ಕೆಯಾಗಿದ್ದರೆ, ಧಾರವಾಡ ಸಂಸದ ಹಾಗೂ ಕಲ್ಲಿದ್ದಿಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಲೋಕಸಭೆ ಅಧಿವೇಶನಕ್ಕಾಗಿ ಸರ್ಕಾರಿ ಸಚೇತಕರನ್ನಾಗಿ ನೇಮಿಸಲಾಗಿದೆ.

ಸಚಿವ ಸ್ಥಾನ ಸಿಗುತ್ತೆ ಅಂದುಕೊಂಡಿದ್ದ ಶೋಭಾ ಕರಂದ್ಲಾಜೆ ಅವರಿಗೆ ಕೊನೆಗಳಿಗೆಯಲ್ಲಿ ಮಂತ್ರಿಗಿರಿ ಸಿಗಲಿಲ್ಲ. ಇದರಿಂದ ಶೋಭಾ ಅವರು ನಿರಾಸೆಯಾಗಿದ್ದರು. ಆದರೆ ಈಗ ಅಚ್ಚರಿಯ ರೀತಿಯಲ್ಲಿ ಸಚೇತಕಿ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯ 303 ಸಂಸದರಿಗೆ ವಿಪ್ ಜಾರಿ ಮಾಡುವ ಮಹತ್ವದ ಕಾರ್ಯ ಮುಖ್ಯ ಸಚೇತಕರಾಗಿದ್ದು, ಲೋಕಸಭೆಯ ನಾಯಕತ್ವದ ಚುನಾವಣೆಗಳು, ರಾಜ್ಯಸಭಾ ಸದಸ್ಯರ ಆಯ್ಕೆ ಮುಂತಾದ ವಿಷಯಗಳಲ್ಲಿ ಸಚೇತಕರು ಪ್ರಮುಖ ಪಾತ್ರ ವಹಿಸಲಿದ್ದಾರೆ.