Asianet Suvarna News Asianet Suvarna News

ಶಬರಿಮಲೆ ಮಹಿಳಾ ಪ್ರವೇಶ ನಿಷೇಧಿಸಿಸುವಂತೆ ಬಿಜೆಪಿ ಉಪವಾಸ

ಶಬರಿಮಲೆ: ಕೇರಳ ಅಸೆಂಬ್ಲಿ ಎದುರು ಬಿಜೆಪಿ ಉಪವಾಸ | ಮಹಿಳೆಯರ ಪ್ರವೇಶ ತೀರ್ಪು ಜಾರಿ ವಿರುದ್ಧ ಆಕ್ರೋಶ |  ವಿಧಾನಸಭೆಯಲ್ಲಿ ಸಿಎಂ- ವಿಪಕ್ಷ ನಾಯಕನ ನಡುವೆ ವಾಕ್ಸಮರ

BJP fast over Shabarimala woman entry issue
Author
Bengaluru, First Published Dec 4, 2018, 8:12 AM IST

ತಿರುವನಂತಪುರ (ಡಿ. 04): ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪು ಜಾರಿಗೆ ತುದಿಗಾಲಿನಲ್ಲಿ ನಿಂತಿರುವ ಕೇರಳ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಬಿಜೆಪಿ ಸೋಮವಾರದಿಂದ ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎನ್‌. ರಾಧಾಕೃಷ್ಣನ್‌ ಅವರು ನಿರಶನ ಆರಂಭಿಸಿದ್ದು, ಇದಕ್ಕೆ ಬಿಜೆಪಿ ಸಂಸದೆ ಸರೋಜ್‌ ಪಾಂಡೆ ಚಾಲನೆ ನೀಡಿದರು. ಕೇರಳದ ಎಲ್ಲ 14 ಜಿಲ್ಲೆಗಳಿಂದ ಬಿಜೆಪಿ ಕಾರ್ಯಕರ್ತರು ಈ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ.

ಈ ವೇಳೆ ಮಾತನಾಡಿದ ಪಾಂಡೆ, ಕೇರಳದ ಸಿಪಿಎಂ ಸರ್ಕಾರ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಸಂಸತ್ತಿನಲ್ಲೂ ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

ವಿಧಾನಸಭೆಯಲ್ಲೂ ಗಲಾಟೆ:

ಈ ನಡುವೆ ಶಬರಿಮಲೆ ವಿಚಾರವಾಗಿ ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ನಡುವೆ ಭರ್ಜರಿ ವಾಕ್ಸಮರ ನಡೆಯಿತು. ಇದರಿಂದಾಗಿ ನಾಲ್ಕನೇ ದಿನವೂ ಕಲಾಪವನ್ನು ಮುಂದೂಡಲಾಯಿತು. ಇದೇ ವೇಳೆ ಯುಡಿಎಫ್‌ನ ಮೂವರು ಶಾಸಕರು ವಿಧಾನಸೌಧದ ಪ್ರವೇಶದ್ವಾರದಲ್ಲೇ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.

ಅಯ್ಯಪ್ಪ ಭಕ್ತರ ಜತೆ ಬಿಜೆಪಿ ಸಂಸದರ ಚರ್ಚೆ

ಶಬರಿಮಲೆ ವಿವಾದ ಕುರಿತು ಬಿಜೆಪಿ ವರಿಷ್ಠರಿಗೆ ವರದಿ ನೀಡಲು ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ ಜೋಶಿ, ದಕ್ಷಿಣ ಕನ್ನಡ ಸಂಸದ ನಳೀನ್‌ ಕುಮಾರ್‌ ಕಟೀಲು, ಛತ್ತೀಸ್‌ಗಢದ ದುರ್ಗ್‌ ಕ್ಷೇತ್ರದ ಸಂಸದೆ ಸರೋಜ್‌ ಪಾಂಡೆ, ಉತ್ತರಪ್ರದೇಶದ ಕೌಶಂಬಿ ಸಂಸದ ವಿನೋದ್‌ ಸೋಂಕರ್‌ ಅವರು ಎರಡು ದಿನಗಳಿಂದ ಕೇರಳದಲ್ಲೇ ಬೀಡುಬಿಟ್ಟಿದ್ದು, ಅಯ್ಯಪ್ಪ ಭಕ್ತರ ಜತೆ ಸಮಾಲೋಚನೆಯಲ್ಲಿ ನಿರತರಾಗಿದ್ದಾರೆ.

ಈ ನಡುವೆ, ಬಿಜೆಪಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಪ್ರಹ್ಲಾದ ಜೋಶಿ ಅವರು, ಶಬರಿಮಲೆಯಲ್ಲಿನ ಸಂಪ್ರದಾಯವನ್ನು ಕೇರಳದ ಕಮ್ಯುನಿಸ್ಟ್‌ ಸರ್ಕಾರ ನಾಶಪಡಿಸುತ್ತಿದೆ. ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಅವರಿಗೆ ಸಲ್ಲಿಸುತ್ತೇವೆ. ಬ್ರಿಟಿಷರ ಕಾಲದಲ್ಲೂ ಧಾರ್ಮಿಕ ನಂಬಿಕೆಯುಳ್ಳವರನ್ನು ಗುರಿಯಾಗಿಸುತ್ತಿರಲಿಲ್ಲ.

ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಜತೆ ಅನುಚಿತವಾಗಿ ವರ್ತಿಸಿದ ಐಪಿಎಸ್‌ ಅಧಿಕಾರಿ ಯತೀಶ್‌ ಚಂದ್ರ (ಕರ್ನಾಟಕದ ದಾವಣಗೆರೆಯವರು) ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ರಾಧಾಕೃಷ್ಣನ್‌ ಅವರಿಗೆ ಹೇಳುತ್ತೇವೆ. ಪೊಲೀಸ್‌ ಅಧಿಕಾರಿಯನ್ನು ಸಂಸತ್ತಿಗೆ ಕರೆಸುತ್ತೇವೆ. ಅಯ್ಯಪ್ಪ ಭಕ್ತರಿಗೆ ಕಮ್ಯುನಿಸ್ಟ್‌ ಸರ್ಕಾರ ಇದೇ ರೀತಿ ತೊಂದರೆ ಕೊಟ್ಟರೆ ಬಂಗಾಳ ಕೊಲ್ಲಿಗೆ ಎಸೆಯಬೇಕಾಗುತ್ತದೆ ಎಂದು ಗುಡುಗಿದರು.  

Follow Us:
Download App:
  • android
  • ios