ಸಾಲ ಮನ್ನಾಕ್ಕೆ ಬಿಜೆಪಿ 1 ವಾರದ ಗಡುವು

BJP Extends Deadline  1 Week To  Farm Loan Waiver
Highlights

ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಕರ್ನಾಟಕ ಬಂದ್‌ ಆಚರಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯು ಸಾಲ ಮನ್ನಾ ವಿಷಯದಲ್ಲಿ ಸ್ಪಷ್ಟನಿಲುವು ಪ್ರಕಟಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಂದು ವಾರದ ಗಡುವು ವಿಧಿಸಿದೆ.

ಬೆಂಗಳೂರು :  ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ಕರ್ನಾಟಕ ಬಂದ್‌ ಆಚರಿಸಿದ ಬೆನ್ನಲ್ಲೇ ರಾಜ್ಯ ಬಿಜೆಪಿಯು ಸಾಲ ಮನ್ನಾ ವಿಷಯದಲ್ಲಿ ಸ್ಪಷ್ಟನಿಲುವು ಪ್ರಕಟಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಒಂದು ವಾರದ ಗಡುವು ವಿಧಿಸಿದೆ.

ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಕೃಷಿಕರ ಸಾಲ ಮನ್ನಾ ಮಾಡದಿದ್ದರೆ ಮುಂದಿನ ಹೋರಾಟದ ರೂಪರೇಷೆ ನಿರ್ಧರಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾಕ್ಕೆ ಒತ್ತಾಯಿಸಿ ಬೆಂಗಳೂರು ಹೊರತುಪಡಿಸಿ ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲಿ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್‌ ಯಶಸ್ಸು ಕಂಡಿದೆ. ಅಲ್ಲದೆ ಪೊಲೀಸ್‌ ಬಲವನ್ನು ದುರುಪಯೋಗಪಡಿಸಿಕೊಂಡ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಸಹ ಯತ್ನಿಸಿತು. ಪ್ರತಿಭಟನೆಯಲ್ಲಿ ತೊಡಗಿದ್ದ ಪಕ್ಷದ ಸಂಸದರು ಹಾಗೂ ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ಬಂಧಿಸುವ ಅಗತ್ಯವೇನಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈಗ ದಿನಕ್ಕೊಂದು ಹೇಳಿಕೆ ನೀಡುತ್ತಾ ರಾಜ್ಯದ ಜನರನ್ನು ತಪ್ಪು ಹಾದಿಗೆಳೆಯುತ್ತಿದ್ದಾರೆ. ಮಂತ್ರಿಮಂಡಲ ರಚನೆ ಹಾಗೂ ಖಾತೆಗಳ ಹಂಚಿಕೆ ಗೊಂದಲದಲ್ಲಿ ಮುಳುಗಿರುವ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹರಿಹಾಯ್ದರು.

ಕಳೆದ ಐದು ವರ್ಷಗಳಲ್ಲಿ 3800ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗ ವಿಧಾನಸಭಾ ಚುನಾವಣೆ ನಂತರವೂ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ರೈತರು ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಮನ್ನಾ ಮಾಡಿದ್ದರೆ ಈ ರೈತರ ಪ್ರಾಣಹಾನಿ ದುರಂತವನ್ನು ತಪ್ಪಿಸ ಬಹುದಿತ್ತು. ಇದೀಗ ಮೈತ್ರಿ ಸರ್ಕಾರದ ನೆಪವೊಡ್ಡಿ ತಾವು ನೀಡಿದ ಭರವಸೆಯಿಂದ ಮುಖ್ಯಮಂತ್ರಿಗಳು ಹಿಂದೆ ಸರಿಯುತ್ತಿರುವುದು ಖಂಡನಾರ್ಹ ಎಂದರು.

ಅವರು ಸಾಂದರ್ಭಿಕ ಶಿಶುವಾದರೂ ಆಗಲಿ, ಸನ್ನಿವೇಶದ ಶಿಶುವಾದರೂ ಆಗಲಿ. ಆದರೆ ರಾಜ್ಯದ ಮುಖ್ಯಮಂತ್ರಿ ಆದವರ ಸಂದರ್ಭ ಅಥವಾ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ನಿಲುವುಗಳಿಗೆ ರಾಜ್ಯದ ರೈತರು ಬಲಿಪಶುವಾಗುವುದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಗುಡುಗಿದರು.

ಚುನಾವಣೆಗೆ ಮುನ್ನ ನೀಡಿದ ವಾಗ್ದಾನದಂತೆ ಕುಮಾರಸ್ವಾಮಿ ಅವರು ಮಿತ್ರ ಪಕ್ಷ ಕಾಂಗ್ರೆಸ್‌ನಿಂದ ಸಾಲಮನ್ನಾ ವಿಚಾರದಲ್ಲಿ ಭರವಸೆ ಪಡೆಯಬೇಕಿತ್ತು. ಆದರೆ ಕುರ್ಚಿ ಆಸೆಗೆ ಬಿದ್ದು ಮುಖ್ಯಮಂತ್ರಿಯಾದ ಅವರು, ಈಗ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಲಾಜಿನ ಹೇಳಿಕೆಗೆ ಕ್ಷಮೆ ಕೇಳಿ

ನಾನು ರಾಜ್ಯದ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾಡಿನ ಆರೂವರೆ ಕೋಟಿ ಜನರಿಗೆ ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ಯಡಿಯೂರಪ್ಪ ಆಪಾದಿಸಿದರು.

ಇದುವರೆಗೆ ಮತದಾರರ ಬಗ್ಗೆ ಇಷ್ಟುಅವಹೇಳನಕಾರಿಯಾಗಿ ಯಾವ ಮುಖ್ಯಮಂತ್ರಿಯೂ ಮಾತನಾಡಿದ ನಿದರ್ಶನವಿಲ್ಲ. ಈ ಹೇಳಿಕೆಗೆ ಅವರು ನಾಡಿನ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

loader