ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿ ಪಕ್ಷದ ಕೆಲವು ಮುಖಂಡರ ವಿವಾದಾತ್ಮಕ ಮತ್ತು ಕೀಳು ಮಟ್ಟದ ಹೇಳಿಕೆಗಳಿಗೆ ಕಡಿವಾಣ ಬೀಳುವ ಸಾಧ್ಯತೆಯಿದೆ.
ಬೆಂಗಳೂರು (ಡಿ.27): ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿ ಪಕ್ಷದ ಕೆಲವು ಮುಖಂಡರ ವಿವಾದಾತ್ಮಕ ಮತ್ತು ಕೀಳು ಮಟ್ಟದ ಹೇಳಿಕೆಗಳಿಗೆ ಕಡಿವಾಣ ಬೀಳುವ ಸಾಧ್ಯತೆಯಿದೆ. ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಎಲ್ಲ ನಾಯಕರೂ ಈ ವಿಷಯ ಪ್ರಸ್ತಾಪಿಸಿ, ಕಡಿವಾಣ ಹಾಕುವಂತೆ ಸಭೆಯ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಯಾವುದೇ ಹೇಳಿಕೆಗಳನ್ನು ನೀಡುವಾಗಲೂ ಬಹು ಎಚ್ಚರಿಕೆಯಿಂದ ಇರಬೇಕು. ಒಂದು ಸಣ್ಣ ಲೋಪವಾದರೂ ಅದು ವಿವಾದವಾಗಿ ಮಾರ್ಪಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಪುಂಖಾನುಪುಂಖವಾಗಿ ಟೀಕೆ-ಟಿಪ್ಪಣೆಗಳು ಕೇಳಿಬರುತ್ತವೆ. ಅನಗತ್ಯವಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಬಿಜೆಪಿ ಮುಖಂಡರ ಹೇಳಿಕೆಗಳನ್ನೇ ಗಂಭೀರವಾಗಿ ಹಿಂಬಾಲಿಸುತ್ತಿದ್ದಾರೆ. ಸಣ್ಣ ತಪ್ಪು ಕಂಡು ಬಂದರೂ ಅದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಮಾತನಾಡಿದ ಹಲವು ನಾಯಕರು ಪ್ರಸ್ತಾಪಿಸಿದರು. ಅನಂತ ಹೆಗಡೆ, ಪ್ರತಾಪ್ ಸಿಂಹ ಅವರು ಸೂಕ್ಷ್ಮ ವಿಷಯಗಳ ಬಗ್ಗೆ ಗೊಂದಲಕಾರಿ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ಹೊಡೆತ ನೀಡಲಿದೆ. ಅವರು ನೀಡುವ ಹೇಳಿಕೆಗಳಿಗೆ ನಾವು ಎಲ್ಲರೂ ಮಾಧ್ಯಮಗಳಿಗೆ ಉತ್ತರ ನೀಡಬೇಕಾಗುತ್ತದೆ.
ಪರಿಣಾಮ, ಮುಖ್ಯ ವಿಚಾರಗಳಿಂದ ವಿಷಯಾಂತರವಾಗುತ್ತಿದೆ. ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರೂ ಅದೆಲ್ಲವೂ ಗೌಣವಾಗುತ್ತದೆ. ಹೀಗಾದರೆ ಚುನಾವಣೆ ಎದುರಿಸುವುದು ಹೇಗೆ? ಎಂಬ ಪ್ರಶ್ನೆಗಳನ್ನು ಹಿರಿಯ ನಾಯಕರು ಜಾವಡೇಕರ್ ಮುಂದಿಟ್ಟಿದ್ದಾರೆ. ಇದನ್ನು ತಾವು ಆ ಸಂಸದರೊಂದಿಗೆ ಮಾತನಾಡಿ ಸೂಚನೆ ನೀಡುವುದಾಗಿ ಜಾವಡೇಕರ್ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
