Asianet Suvarna News Asianet Suvarna News

ನೋಟು ಅಪನಗದೀಕರಣ : ಬಿಜೆಪಿಯಿಂದಲೇ ನಡೆಯಿತಾ ಭಾರೀ ಅಕ್ರಮ .?

ಅಪನಗದೀಕರಣದಿಂದಾಗಿ ಚಲಾವಣೆ ಕಳೆದುಕೊಂಡ ನೋಟುಗಳು ದೇಶದ ಸಹಕಾರಿ ಬ್ಯಾಂಕುಗಳ ಪೈಕಿ ಅಧಿಕ ಪ್ರಮಾಣದಲ್ಲಿ ಜಮೆಯಾಗಿದ್ದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳಲ್ಲಿ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಎಡಿಸಿಬಿ), ಇಂಥ ನೋಟುಗಳ ಸಂಗ್ರಹದಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿತ್ತು ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.

BJP converted their black money into white during note ban: Cong

ಮುಂಬೈ/ನವದೆಹಲಿ: ಅಪನಗದೀಕರಣದಿಂದಾಗಿ ಚಲಾವಣೆ ಕಳೆದುಕೊಂಡ ನೋಟುಗಳು ದೇಶದ ಸಹಕಾರಿ ಬ್ಯಾಂಕುಗಳ ಪೈಕಿ ಅಧಿಕ ಪ್ರಮಾಣದಲ್ಲಿ ಜಮೆಯಾಗಿದ್ದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳಲ್ಲಿ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಎಡಿಸಿಬಿ), ಇಂಥ ನೋಟುಗಳ ಸಂಗ್ರಹದಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿತ್ತು ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.

ಆರ್‌ಟಿಐನಿಂದ ಇಂಥದ್ದೊಂದು ಮಾಹಿತಿ ಹೊರಬೀಳುತ್ತಲೇ ಅದನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್‌ ಈ ಬಗ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಈ ಬಗ್ಗೆ ತನಿಖೆಯಾಗಬೇಕು, ಪ್ರಧಾನಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದೆ. ಆದರೆ, ಈ ವ್ಯವಹಾರದಲ್ಲಿ ಅಸಹಜವಾದದ್ದೇನೂ ಇಲ್ಲ ಎಂದು ನಬಾರ್ಡ್‌ ಸ್ಪಷ್ಟಪಡಿಸಿದೆ. ಮತ್ತೊಂದೆಡೆ ಇದು ವೃಥಾ ಪಕ್ಷಕ್ಕೆ ಕಳಂಕ ತರಲು ಕಾಂಗ್ರೆಸ್‌ ನಡೆಸಿದ ಷಡ್ಯಂತ್ರ ಎಂದು ಬಿಜೆಪಿ ತಿರುಗೇಟು ನೀಡಿದೆ.

ಎಲ್ಲಿ ಎಷ್ಟುಹಣ ಜಮೆ?:  2008ರ ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಪನಗದೀಕರಣ ನಿರ್ಧಾರ ಘೋಷಣೆ ಮಾಡಿದ್ದರು. ಚಲಾವಣೆ ಕಳೆದುಕೊಂಡ 500, 1000 ರು. ಮುಖಬೆಲೆಯ ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಲು ಅವಕಾಶ ಕಲ್ಪಿಸಿದ್ದರು. ಈ ಹಿನ್ನೆಲೆ ಅಪನಗದೀಕರಣದಿಂದಾಗಿ ಚಲಾವಣೆ ಕಳೆದುಕೊಂಡ ನೋಟುಗಳು, ಯಾವ ರಾಜ್ಯದಲ್ಲಿ ಎಷ್ಟೆಷ್ಟುಪ್ರಮಾಣದಲ್ಲಿ ರಾಜ್ಯ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಜಮೆ ಆಗಿದೆ ಎಂದು ಮುಂಬೈ ಮೂಲಕ ಮಾಹಿತಿ ಹಕ್ಕು ಕಾರ್ಯಕರ್ತ ಮನೋರಂಜನ್‌ ಎಸ್‌.ರಾಯ್‌ ಎಂಬುವವರು ಮಾಹಿತಿ ಕೋರಿದ್ದರು.

ಬಿಜೆಪಿ ನಂ.1:  ರಾಯ್‌ ಅವರ ಪ್ರಶ್ನೆಗೆ ಇದೀಗ ನಬಾರ್ಡ್‌ ಉತ್ತರ ನೀಡಿದ್ದು ಅದರನ್ವಯ, ಹಳೆ ನೋಟು ಜಮೆಗೆ ನೀಡಿದ್ದ ಅವಧಿಯಲ್ಲಿ ದೇಶಾದ್ಯಂತ ಒಟ್ಟಾರೆ ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ 22270 ಕೋಟಿ ರು. ಹಣ ಜಮೆ ಮಾಡಲಾಗಿತ್ತು. ಈ ಪೈಕಿ 14,293 ಕೋಟಿ ರು. ಹಣವನ್ನು ಬಿಜೆಪಿ, ಅದರ ಮಿತ್ರಪಕ್ಷಗಳು (ಆಗಿನ ಸಂದರ್ಭ) ಆಡಳಿತ ನಡೆಸುತ್ತಿರುವ 18 ರಾಜ್ಯಗಳಲ್ಲಿ ಜಮೆಯಾಗಿತ್ತು. ಇನ್ನು ಬಿಜೆಪಿಯೇತರ ಆಡಳಿತವಿದ್ದ 14 ರಾಜ್ಯಗಳ ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ 7977 ಕೋಟಿ ರು. ಹಣ ಜಮೆ ಆಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಡುವುದರಲ್ಲಿ ಪ್ರಥಮ ಸ್ಥಾನ ಪಡೆದಿರುವ ಅಹಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ಅಮಿತ್‌ ಶಾ ಅವರಿಗೆ ಅಭಿನಂದನೆಗಳು. 750 ಕೋಟಿ ರು.ಗಳನ್ನು ಕೇವಲ ಐದೇ ದಿನದಲ್ಲಿ ಬದಲಿಸಿದ್ದೀರಿ! ಅಪನಗದೀಕರಣದಿಂದ ಲಕ್ಷಾಂತರ ಭಾರತೀಯರ ಜೀವನ ನಾಶವಾಗಿದೆ. ನಿಮ್ಮ ಸಾಧನೆಗೆ ಸಲ್ಯೂಟ್‌!

- ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷ 

ಇನ್ನು ರಾಜ್ಯ ಸಹಕಾರ ಬ್ಯಾಂಕ್‌ಗಳ ಪೈಕಿ ಬಿಜೆಪಿ ಮತ್ತು ಅದರ ಮಿತ್ರರ ಆಡಳಿತದ ರಾಜ್ಯಗಳಲ್ಲಿ 3374 ಕೋಟಿ ರು. ಹಾಗೂ ಉಳಿದ ರಾಜ್ಯಗಳಲ್ಲಿ 3032 ಕೋಟಿ ರು. ಜಮೆ ಆಗಿತ್ತು ಎಂದು ಮಾಹಿತಿ ನೀಡಲಾಗಿದೆ. ಇದೇ ವೇಳೆ ಕರ್ನಾಟಕದಲ್ಲಿ ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ 371 ಕೋಟಿ ರು. ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ 1848 ಕೋಟಿ ರು. ಜಮೆ ಆಗಿದೆ ಎಂಬ ಉತ್ತರ ನೀಡಲಾಗಿದೆ.

ಗುಜರಾತ್‌ ನಂ.1:  ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಗುಜರಾತ್‌ನ ಅಹಮದಾಬಾದ್‌ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ಕೇವಲ 5 ದಿನದಲ್ಲಿ 745.59 ಕೋಟಿ ರು. ಜಮೆಯಾಗಿತ್ತು. ಇಷ್ಟೊಂದು ಮೊತ್ತ ದೇಶದ ಬೇರಾವ ಸಹಕಾರಿ ಬ್ಯಾಂಕುಗಳಲ್ಲೂ ಜಮೆ ಆಗಿರಲಿಲ್ಲ. ಜೊತೆಗೆ ಈ ಬ್ಯಾಂಕಿನ ಹಿಂಭಾಗದಲ್ಲೇ ಇರುವ ರಾಜ್‌ಕೋಟ್‌ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ 693.19 ಕೋಟಿ ರು. ಜಮೆಯಾಗಿತ್ತು. ಇದು ದೇಶದಲ್ಲೇ ಎರಡನೇ ಅತ್ಯಧಿಕ ಮೊತ್ತ. ಆ ಬ್ಯಾಂಕಿಗೆ ಗುಜರಾತ್‌ ಸಚಿವ ಜಯೇಶ್‌ ಭಾಯ್‌ ವಿಠಲ್‌ ಭಾಯ್‌ ಅಧ್ಯಕ್ಷರಾಗಿದ್ದಾರೆ ಎಂಬ ಮಾಹಿತಿ ಆರ್‌ಟಿಐನಡಿ ನಬಾರ್ಡ್‌ನಿಂದ ಲಭಿಸಿರುವ ಉತ್ತರವನ್ನು ಪರಿಶೀಲಿಸಿ, ವಿಶ್ಲೇಷಣೆಗೊಳಪಡಿಸಿದಾಗ ತಿಳಿದುಬಂದಿದೆ.

ಕಾಂಗ್ರೆಸ್‌ ಕಿಡಿ:  ಚಲಾವಣೆ ಕಳೆದುಕೊಂಡ ನೋಟುಗಳು ಅಮಿತ್‌ ಶಾ ಅವರು ನಿರ್ದೇಶಕರಾಗಿರುವ ಬ್ಯಾಂಕಿನಲ್ಲಿ ಭಾರಿ ಪ್ರಮಾಣದಲ್ಲಿ ಜಮೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಟೀಕಾ ಪ್ರಹಾರ ನಡೆಸಿದೆ. ಅಮಿತ್‌ ಶಾ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದೇ ನರೇಂದ್ರ ಮೋದಿ. ಹೀಗಾಗಿ ಅವರು ಮುಂದೆ ಬಂದು, ಶಾ ವಿರುದ್ಧದ ಆರೋಪಗಳ ಕುರಿತಂತೆ ಉತ್ತರ ನೀಡಬೇಕು. ಈ ಹಗರಣದ ಬಗ್ಗೆ ಕಾಲಮಿತಿಯಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ಸಿನ ವಕ್ತಾರ ರಣದೀಪ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ. ಅಕ್ರಮವಾಗಿ ಗಳಿಸಿದ ಕಪ್ಪು ಹಣವನ್ನು ಬಿಳಿ ಮಾಡುವ ಸ್ವತಂತ್ರ ಭಾರತದ ಅತಿದೊಡ್ಡ ಹಗರಣ ಅಪನಗದೀಕರಣ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಜರಿದಿದ್ದಾರೆ.

ಅಂಥದ್ದೇನೂ ಆಗಿಲ್ಲ:  ಆದರೆ ಅಹಮದಾಬಾದ್‌ ಸಹಕಾರಿ ಬ್ಯಾಂಕಿನಲ್ಲಿ ಅಸಾಮಾನ್ಯ ಎನ್ನುವ ರೀತಿಯಲ್ಲಿ ನಿಷೇಧಿತ ನೋಟುಗಳು ಜಮೆ ಆಗಿಲ್ಲ. ಆ ಬ್ಯಾಂಕಿನ ಗಾತ್ರಕ್ಕೆ ಹೋಲಿಸಿದರೆ ಇದು ದೊಡ್ಡ ಮೊತ್ತವಲ್ಲ. ಎಲ್ಲ ಕೆವೈಸಿ ನಿಯಮಗಳನ್ನೂ ಪಾಲನೆ ಮಾಡಲಾಗಿದೆ. ಬ್ಯಾಂಕಿನಲ್ಲಿ 17 ಲಕ್ಷ ಬ್ಯಾಂಕ್‌ ಖಾತೆಗಳು ಇದ್ದು, ಆ ಪೈಕಿ 1.6 ಲಕ್ಷ ಮಂದಿ ಮಾತ್ರ ಹಣ ಜಮೆ ಮಾಡಿದ್ದಾರೆ. ಇವರೆಲ್ಲರ ಸರಾಸರಿ ಜಮೆ ಮೊತ್ತ 46,795 ರು.ಆಗಿದೆ. ಇದು ಗುಜರಾತಿನ 18 ಸಹಕಾರಿ ಬ್ಯಾಂಕುಗಳಲ್ಲಿ ಜಮೆಯಾದ ಸರಾಸರಿ ಮೊತ್ತಕ್ಕಿಂತ ಕಡಿಮೆ. ಬ್ಯಾಂಕಿನ ಒಟ್ಟು ಠೇವಣಿಗೆ ಹೋಲಿಸಿದರೆ ಇದು ಶೇ.9.37ರಷ್ಟುಪ್ರಮಾಣದಲ್ಲಿದೆ ಎಂದು ನಬಾರ್ಡ್‌ ಹೇಳುವ ಮೂಲಕ ಏನೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

  • ರಾಜ್ಯ ಸಹಕಾರಿ ಬ್ಯಾಂಕ್‌ ವಿವರ
  • 6407 ಕೋಟಿ ರು : ದೇಶಾದ್ಯಂತ ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ ಜಮೆ
  • 3374 ಕೋಟಿ ರು.: ಬಿಜೆಪಿ, ಮಿತ್ರರ ಆಡಳಿತದ ರಾಜ್ಯಗಳಲ್ಲಿ ಜಮೆ
  • 3032 ಕೋಟಿ ರು.: ಬಿಜೆಪಿಯೇತರ ರಾಜ್ಯಗಳಲ್ಲಿ ಜಮೆ ಆದ ಹಣ
  • 2219 ಕೋಟಿ ರು.: ಕರ್ನಾಟಕದಲ್ಲಿ ಜಮೆ ಆದ ಒಟ್ಟು ಹಣ
  • 371 ಕೋಟಿ ರು: ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ ಜಮೆ
  • 1848 ಕೋಟಿ ರು.: ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಜಮೆ ಆದ ಹಣ
Follow Us:
Download App:
  • android
  • ios