Asianet Suvarna News Asianet Suvarna News

ಗುಜರಾತಲ್ಲಿ ಬಿಜೆಪಿ, ಕಾಂಗ್ರೆಸ್ ಟೈಟ್‌ಫೈಟ್

ಎಬಿಪಿ ನ್ಯೂಸ್ ಸಮೀಕ್ಷೆ  95 ಬಿಜೆಪಿ, 82 ಕಾಂಗ್ರೆಸ್

BJP Congress Tight Fight in Gujarat Says Pre Poll Survey

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಬಗ್ಗೆ ಅಚ್ಚರಿಯ ಸಮೀಕ್ಷಾ ಫಲಿತಾಂಶವೊಂದು ಹೊರಬಿದ್ದಿದೆ. 2 ದಶಕಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ ಈ ಸಲವೂ ಗೆಲುವು ಸುಲಭದ ತುತ್ತು ಎಂಬುದು ಈವರೆಗಿನ ಅಭಿಪ್ರಾಯ ವಾಗಿತ್ತು. ಆದರೆ ಸೋಮವಾರ ಪ್ರಕಟವಾದ ಚುನಾವಣಾ ಪೂರ್ವ ಸಮೀಕ್ಷೆಯೊಂದು, ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಡಲಿದೆ ಎಂದು ಹೇಳಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಹುಮತಕ್ಕೆ 92 ಸ್ಥಾನ ಬೇಕಿದೆ.

ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಸಮೀಕ್ಷೆ ಅನ್ವಯ ಬಿಜೆಪಿ 91-99 ಸ್ಥಾನ (ಸರಾಸರಿ 95) ಪಡೆಯಲಿದ್ದರೆ, ಕಾಂಗ್ರೆಸ್‌ಗೆ 78-86 (ಸರಾಸರಿ 82) ಸ್ಥಾನ, ಇತರರಿಗೆ 3-7 ಸ್ಥಾನ ಲಭ್ಯವಾಗಲಿದೆ. ಆದರೂ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಿದೆ.

ಬಿಜೆಪಿಗೆ ಹೊಡೆತ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 61 ಸ್ಥಾನ ಗೆದ್ದಿತ್ತು. ಆ ಲೆಕ್ಕಾಚಾರದಲ್ಲಿ ಈ ಬಾರಿ ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಬಾರಿ ಚಲಾವಣೆಯಾದ ಮತಗಳ ಪೈಕಿ ಬಿಜೆಪಿಗೆ ಶೇ.47ರಷ್ಟು ಸಿಕ್ಕಿದ್ದರೆ, ಕಾಂಗ್ರೆಸ್‌ಗೆ ಶೇ.38 ಮತ ಸಿಕ್ಕಿತ್ತು. ಆದರೆ ಈ ಬಾರಿ ಉಭಯ ಪಕ್ಷಗಳು ಶೇ.43ರಷ್ಟು ಮತ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ನಿರ್ಣಾಯಕರು: ಈ ಬಾರಿ ನಿರ್ಣಾಯಕರು ಎಂದು ಹೇಳಲಾದ ಪಾಟಿದಾರ್ ಸಮುದಾಯದ ಮತದಾರರ ಪೈಕಿ ಶೇ.43ರಷ್ಟು ಜನ ಬಿಜೆಪಿಯನ್ನು ಶೇ.40ರಷ್ಟು ಜನ ಕಾಂಗ್ರೆಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದು ಕಳೆದ ಬಾರಿಗಿಂತ ಪಾಟೀದಾರ್ ಸಮುದಾಯ ಈ ಬಾರಿ ಕಾಂಗ್ರೆಸ್ ಕಡೆ ಮುಖ ಮಾಡಿರುವುದರ ಸಂಕೇತ. ಇದೇ ವೇಳೆ ಜಿಎಸ್‌ಟಿ ವಿವಾದದ ಹೊರತಾಗಿಯೂ ಉದ್ಯಮಿಗಳು ಬಿಜೆಪಿಗೆ ತಮ್ಮ ಬೆಂಬಲ ಮುಂದುವರೆಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಎಲ್ಲಿ ಯಾರು ಪ್ರಬಲ: ಮಧ್ಯ ಗುಜರಾತ್ ಮತ್ತು ಪಾಟೀದಾರ್ ಸಮುದಾಯ ಹೆಚ್ಚಿರುವ ಸೌರಾಷ್ಟ್ರ ಪ್ರದೇಶದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಮುನ್ನಡೆ ಹೊಂದಿದೆ. ಆದರೆ ಈ ಭಾಗದಲ್ಲಿ ಬಿಜೆಪಿ ಮತ ಪ್ರಮಾಣ ಇಳಿಕೆಯಾಗಲಿದೆ. ಉತ್ತರ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ವ್ಯತ್ಯಾಸದ ಹೊಡೆತ: ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಿದ್ದ ಮತಗಳ ನಡುವಣ ವ್ಯತ್ಯಾಸ ಶೇ.9ರಷ್ಟಿತ್ತು. ಅದನ್ನು ತೊಡೆದುಹಾಕಲು ಈ ಬಾರಿ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಪರಿಣಾಮ ಈ ಬಾರಿ ಉಭಯ ಪಕ್ಷಗಳು ಪಡೆಯುವ ಮತ ಪ್ರಮಾಣ ಸಮನಾಗಿರಲಿದೆ. ಹೀಗಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

Follow Us:
Download App:
  • android
  • ios